ಚೆನ್ನೈ(ಫೆ.22): ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರ ಮಾತುಗಳು ಭಾರೀ ಸಂಚಲನ ಮೂಡಿಸುತ್ತಿವೆ, ರಾಜಕೀಯ ವಾಗ್ದಾಳಿಯೂ ಮತ್ತೊಂದು ಹಂತಕ್ಕೆ ತಲುಪಿದೆ. ಸದ್ಯ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ತಮಿಳುನಾಡಿನ ಡಿಎಂಕೆಯನ್ನು ಹಿಂದೂ ವಿರೋಧಿ ಪಕ್ಷ ಎಂದು ಟೀಕಿಸಿದ್ದು, ಎಂಕೆ ಸ್ಟಾಲಿನ್‌ ಪಕ್ಷವನ್ನು ಸೋಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಹಾಗೂ ಪ್ರೋತ್ಸಾಹಿಸುವ ಏಕೈಕ ಪಕ್ಷ ಬಿಜೆಪಿ ಎಂದು ಹೇಳಿದ್ದಾರೆ.

ಸೇಲಂನಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಡಿಎಂಕೆ ಪಕ್ಷ ಹಿಂದೂ ವಿರೋಧಿಯಾಗಿರುವ ಕೆಟ್ಟ ಸಿದ್ಧಾಂತ ಪ್ರತಿನಿಧಿಸುತ್ತದೆ. ತಮಿಳುನಾಡು ಇದು ದೇಶದಲ್ಲೇ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಪವಿತ್ರ ಭೂಮಿ, ಪ್ರತಿಯೊಬ್ಬ ತಮಿಳಿಗ ಹೆಮ್ಮೆಯ ಹಿಂದೂ.  ತಮಿಳುನಾಡಿನ ಪ್ರತಿ ಇಂಚು ಪವಿತ್ರವಾಗಿದೆ, ಆದರೆ ಇಲ್ಲಿ ಡಿಎಂಕೆ ಹಿಂದೂ ವಿರೋಧಿಯಾಗಿದೆ. ಹೀಗಾಗಿ ನಾವು ಡಿಎಂಕೆಯನ್ನು ಸೋಲಿಸಲೇಬೇಕು ಎಂದು ಮನವಿ ಮಾಡಿದ್ದಾರೆ.

ದೇಶದ ಎಲ್ಲಾ ಪ್ರಾದೇಶಿಕ ಭಾಷೆಗೆ ಗೌರವ

ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಏಕೈಕ ಪಕ್ಷ ಎಂದರೆ, ಅದು ಬಿಜೆಪಿ. ತಮಿಳು ಉಳಿಯಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ, ಹಿಂದುತ್ವ ಗೆಲ್ಲಬೇಕು ಎಂದು ಹೇಳಿದ್ದಾರೆ. ಅಲ್ಲದೇ ಡಿಎಂಕೆ ಕುಟುಂಬವೇ ಪಕ್ಷವಾಗಿದ್ದರೆ, ಬಿಜೆಪಿಗೆ ಪಕ್ಷವೇ ಕುಟುಂಬವಾಗಿದೆ ಎಂದು ಎಂಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ವಿರುದ್ಧ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.

2021ರ ಏಪ್ರಿಲ್‌ ಅಥವಾ ಮೇನಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣಾ ರಣಕಣ ಜೋರಾಗಿದೆ. ರಾಜಕೀಯ ನಾಯಕರ ವಾಕ್ಸಮರವೂ ಹೆಚ್ಚಾಘುತ್ತಿದೆ.