ಪಟನಾ(ಫೆ.13): ಬಿಹಾರದಲ್ಲಿ ಕೊರೋನಾ ಪರೀಕ್ಷೆಯ ಗುರಿ ತಲುಪಲು ನಕಲಿ ಎಂಟ್ರಿಗಳನ್ನು ಸೇರಿಸಲಾಗಿದೆ ಎಂಬ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ತನಿಖೆ ಆದೇಶಿಸಿದೆ.

‘ಜನವರಿಯಲ್ಲಿ ಕೋವಿಡ್‌ ಪರೀಕ್ಷೆಯ ಗುರಿಯನ್ನು ತಲುಪಲು 885 ನಕಲಿ ಎಂಟ್ರಿಗಳನ್ನು ಮಾಡಲಾಗಿತ್ತು. ಸುಳ್ಳು ಫೋನ್‌ ಸಂಖ್ಯೆಗಳನ್ನೂ ಹಾಕಲಾಗಿತ್ತು. ಇನ್ನು ಕೆಲವು ಪ್ರಕರಣಗಳಲ್ಲಿ ಸುಳ್ಳು ಮಾಹಿತಿ ಕೊಟ್ಟು ಬಳಕೆ ಆಗದ ಟೆಸ್ಟಿಂಗ್‌ ಕಿಟ್‌ಗಳಿಂದ ಲಾಭ ಮಾಡಿಕೊಳ್ಳಲಾಗಿದೆ’ ಎಂದು ಇಂಗ್ಲಿಷ್‌ ಪತ್ರಿಕೆಯೊಂದು ವರದಿ ಮಾಡಿದೆ.

ಈ ವರದಿ ಉಲ್ಲೇಖಿಸಿ ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಕಿಡಿಕಾರಿದ್ದು, ‘ಬಿಹಾರದಲ್ಲಿ ಸುಳ್ಳು ದತ್ತಾಂಶಗಳನ್ನು ನೀಡಿ ಅಧಿಕಾರಿಗಳು ಸರ್ಕಾರದ ಹಣವನ್ನು ಲೂಟಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ಕಳೆದ 15 ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ’ ಎಂದು ಆರೋಪಿಸಿದ್ದಾರೆ. ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆ ಆದೇಶಿಸಿದೆ.