ನವದೆಹಲಿ(ಮೇ.13): ಕೋವಿಡ್‌ ಲಸಿಕೆ ಪಡೆಯಲು ಆನ್‌ಲೈನ್‌ ಮೂಲಕ ಹೆಸರು ಪೂರ್ವನೋಂದಣಿಗೆ ಭಾರೀ ಯತ್ನ ನಡೆಸಿದರೂ ಬಹಳಷ್ಟುಜನಸಾಮಾನ್ಯರಿಗೆ ಸುಲಭವಾಗಿ ಸ್ಲಾಟ್‌ (ಸಮಯ) ಲಭ್ಯವಾಗದೇ ಇರುವುದಕ್ಕೆ ಕಾರಣವೇನು ಎಂಬ ರಹಸ್ಯ ಕೊನೆಗೂ ಬಯಲಾಗಿದೆ. ಹೆಸರು ನೋಂದಣಿಗೆ ಇರುವ ಕೋವಿನ್‌ ಆ್ಯಪ್‌/ ವೆಬ್‌ಸೈಟ್‌ನಲ್ಲಿನ ಸಣ್ಣಪುಟ್ಟದೋಷವನ್ನೇ ಬಳಸಿಕೊಂಡು, ಟೆಕ್ಕಿಗಳು ಅಭಿವೃದ್ಧಿಪಡಿಸಿರುವ ಅಲರ್ಟ್‌ ವ್ಯವಸ್ಥೆಗಳಿಂದಾಗಿ ಜನಸಾಮಾನ್ಯರಿಗೆ ಲಸಿಕೆ ಗಗನ ಕುಸುಮವಾಗಿದೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ಲಸಿಕೆ ಪಡೆಯಲು ಸಮಯ ಲಭ್ಯವಿರುವುದನ್ನು ತತ್‌ಕ್ಷಣವೇ ಟೆಲಿಗ್ರಾಂ ಗ್ರೂಪ್‌, ಇ-ಮೇಲ್‌ಗೆ ರವಾನಿಸುವ ವ್ಯವಸ್ಥೆಯನ್ನು ಹಲವು ಟೆಕ್ಕಿಗಳು ರೂಪಿಸಿದ್ದು, ಅದನ್ನು ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಹೀಗಾಗಿ ವೆಬ್‌ಸೈಟ್‌ನಲ್ಲಿ ಸ್ಲಾಟ್‌ ತೆರವಾಗುತ್ತಲೇ ಅವರಿಗೆ ಮಾಹಿತಿ ಸಿಗುತ್ತದೆ. ತಕ್ಷಣ ಅವರು ತಾವು ಲಸಿಕೆ ಪಡೆಯುವ ಸಮಯವನ್ನು ಕಾದಿರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಟೆಕ್ಕಿಗಳಂತೂ ಅಲರ್ಟ್‌ ಬರುತ್ತಲೇ ಅದರಲ್ಲಿ ಸ್ವತಃ ಮಾಹಿತಿ ತುಂಬಿ, ಒಟಿಪಿಯನ್ನೂ ಸ್ವಯಂ ತುಂಬಿ ಸಮಯ ಕಾದಿರಿಸುವ ವ್ಯವಸ್ಥೆ ರೂಪಿಸಿದ್ದಾರೆ.

ಜನಸಾಮಾನ್ಯರಿಗೆ ಸಿಗುತ್ತಿಲ್ಲ:

ಯಾವುದೇ ವ್ಯಕ್ತಿ ಲಸಿಕೆ ಪಡೆಯಲು ಕೋವಿನ್‌ ವೆಬ್‌ಸೈಟ್‌ನಲ್ಲಿ ಹೆಸರು, ಲಸಿಕೆ ಪಡೆಯಬೇಕಾದ ದಿನ ನಮೂದಿಸಬೇಕು. ಆದರೆ ವೆಬ್‌ಸೈಟ್‌ನಲ್ಲಿ ನಿಗದಿತ ಅವಧಿಯ ದಿನಗಳಿಗೆ ಮಾತ್ರವೇ ಮುಂಗಡ ಹೆಸರು ಕಾದಿರಿಸಲು ಸಾಧ್ಯ. ಜೊತೆಗೆ ಸ್ಲಾಟ್‌ ಲಭ್ಯವಾಗುವ ಸಮಯ ಕೂಡ ಯಾವ್ಯಾವುದೋ ಹೊತ್ತಿನಲ್ಲಿ ಬಹಿರಂಗವಾಗುತ್ತದೆ. ಹೀಗಾಗಿ ಯಾವಾಗ ಸಮಯ ಸಿಗುತ್ತದೆ ಎಂದು ಕಾಯುವುದು ಅನಿವಾರ್ಯ. ಜನಸಾಮಾನ್ಯರಿಗೆ ಇದೊಂದೇ ದಾರಿ.

ಆದರೆ ಟೆಕ್ಕಿಗಳು, ಸಾರ್ವಜನಿಕವಾಗಿ ಲಭ್ಯವಿರುವ ಎಪಿಐ (ಅಪ್ಲಿಕೇಷನ್‌ ಪ್ರೋಗ್ರಾಮಿಂಗ್‌ ಇಂಟರ್‌ಫೇಸ್‌) ಗಳನ್ನು ಬಳಸಿಕೊಂಡು, ಕೋವಿನ್‌ ವೆಬ್‌ಗೆ ಕೆಲವೊಂದು ಕೋಡ್‌ಗಳನ್ನು ಬರೆಯುತ್ತಿದ್ದಾರೆ. ಪರಿಣಾಮ ವೆಬ್‌ಸೈಟ್‌ನಲ್ಲಿ ಸ್ಲಾಟ್‌ ಸಿಗುತ್ತಲೇ ಆ ಬಗ್ಗೆ ಕೋಡ್‌ ಬರೆದವರಿಗೆ ಅಲರ್ಟ್‌ ಹೋಗುತ್ತದೆ. ಹೀಗೆ ಕೋಡ್‌ ಬರೆಯುವವರು, ಟೆಲಿಗ್ರಾಂ ಆ್ಯಪ್‌ಗಳಲ್ಲಿ ಗ್ರೂಪ್‌ ರಚಿಸಿಕೊಂಡಿದ್ದಾರೆ. ಅದರಲ್ಲಿ ಲಕ್ಷಾಂತರ ಜನ ಸದಸ್ಯರಾಗಿದ್ದಾರೆ. ಅವರೆಲ್ಲರಿಗೂ ಕ್ಷಣಾರ್ಧದಲ್ಲಿ ಮಾಹಿತಿ ತಲುಪಿ, ಅವರು ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿಕೊಂಡು ಲಸಿಕೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಇ-ಮೇಲ್‌ಗೆ ಅಲರ್ಟ್‌ ಕಳುಹಿಸುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ.

ಇಂಥ ಸೇವೆ ನೀಡಲೆಂದೇ ‘ಅಂಡರ್‌45.ಇನ್‌’, ‘ಗೆಟ್‌ಜಾಬ್‌.ಇನ್‌’ ‘ಪೇಟಿಎಂ ವ್ಯಾಕ್ಸಿನ್‌ ಸ್ಲಾಟ್‌ ಫೈಂಡರ್‌’, ‘ವ್ಯಾಕ್ಸಿನೇಟ್‌ಮಿ.ಇನ್‌’, ‘ಫೈಂಡ್‌ಸ್ಲಾಟ್‌.ಇನ್‌’ ಸೇರಿದಂತೆ ಹಲವಾರು ಗ್ರೂಪ್‌ಗಳು ರಚನೆಗೊಂಡಿದ್ದು, ಇವುಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಪರಿಣಾಮ, ಗ್ರಾಮೀಣ ಜನರು ಮತ್ತು ತಂತ್ರಜ್ಞಾನದ ಹೆಚ್ಚಿನ ಅರಿವು ಇಲ್ಲದವರು ಲಸಿಕೆ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂದು ದೂರು ಕೇಳಿಬಂದಿದೆ.

"

ಏನಿದು ವ್ಯವಸ್ಥೆ?

ವೆಬ್‌ ತಂತ್ರಜ್ಞಾನದ ನಿಪುಣರು ಸಾರ್ವಜನಿಕವಾಗಿ ಲಭ್ಯವಿರುವ ಎಪಿಐ ಬಳಸಿಕೊಂಡು ಕೆಲವೊಂದು ಕೋಡ್‌ ಬರೆಯುತ್ತಿದ್ದಾರೆ. ಪರಿಣಾಮ ಲಸಿಕೆಗೆ ಹೆಸರು ನೋಂದಣಿಗೆ ಇರುವ ಕೋವಿನ್‌ ಆ್ಯಪ್‌ನಲ್ಲಿ ಸ್ಲಾಟ್‌ ಸಿಗುತ್ತಲೇ ಆ ಬಗ್ಗೆ ಅಲರ್ಟ್‌ ಸೃಷ್ಟಿಯಾಗುತ್ತದೆ. ಇಂಥ ಅಲರ್ಟ್‌ಗಳು ಟೆಲಿಗ್ರಾಂ ಗ್ರೂಪ್‌, ಇ-ಮೇಲ್‌ಗೆ ರವಾನೆಯಾಗಿ, ಅದರಲ್ಲಿ ಸದಸ್ಯರಾದವರಿಗೆ ಸ್ಲಾಟ್‌ ಬಗ್ಗೆ ಮಾಹಿತಿ ಹೋಗುತ್ತದೆ. ಅವರು ತಕ್ಷಣವೇ ವೆಬ್‌ಸೈಟ್‌ಗೆ ಹೋಗಿ ಹೆಸರು ನೊಂದಾಯಿಸಿಕೊಳ್ಳುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona