ನೀಟ್ ಪರೀಕ್ಷಾ ಹಗರಣದ ಹಿನ್ನೆಲೆಯಲ್ಲಿ ನಡೆದ ತೀವ್ರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕ ಚಳವಳಿಯ ಒತ್ತಡಕ್ಕೆ ಸಿಲುಕಿ ಮೋದಿ ಸರ್ಕಾರದಲ್ಲಿ ರಾಜೀನಾಮೆ ನೀಡಿದ ಎರಡನೇ ಸಚಿವರಾಗಿದ್ದು, ಈ ಹಿಂದೆ ಇದೇ ರೀತಿ ಹುದ್ದೆ ತೊರೆದ ನಾಯಕ ಯಾರು ಗೊತ್ತಾ?
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಜನಪ್ರತಿಭಟನೆ ಹಾಗೂ ಸಾರ್ವಜನಿಕ ಚಳವಳಿಯ ತೀವ್ರತೆಗೆ ತಲೆಬಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 'ನೀಟ್ ಯುಜಿ' ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹೊರಬಿದ್ದ ದಿನದಿಂದಲೂ ದೇಶಾದ್ಯಂತ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಂದ ಅವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿತ್ತು. ಕಳೆದ 12 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ, ಸಾರ್ವಜನಿಕ ಚಳವಳಿ ಮತ್ತು ತೀವ್ರ ಒತ್ತಡದ ಕಾರಣಕ್ಕೆ ರಾಜೀನಾಮೆ ನೀಡಿದ ಎರಡನೇ ಕೇಂದ್ರ ಸಚಿವರಾಗಿದ್ದಾರೆ ಧರ್ಮೇಂದ್ರ ಪ್ರಧಾನ್.
ಶಿಕ್ಷಣ ಸಚಿವರ ವಿಕೆಟ್ ಪತನ!
ನೀಟ್ ಪತ್ರಿಕೆ ಸೋರಿಕೆಯ ಪ್ರಮುಖ ಮುಖವಾಗಿ ಅಭಿಜೀತ್ ದೀಪ್ಕೆ ಹೆಸರು ಮುನ್ನೆಲೆಗೆ ಬಂದ ನಂತರ, ಪ್ರಸಿದ್ಧ ಪರಿಸರ ಪ್ರೇಮಿ ಹಾಗೂ ಹೋರಾಟಗಾರ ಸೋನಮ್ ವಾಂಗ್ಚುಕ್ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ವಿದ್ಯಾರ್ಥಿ ಪಡೆ ನಡೆಸಿದ ಈ ಪ್ರತಿಭಟನೆ ವೇಳೆ ಲಾಠಿಚಾರ್ಜ್ ಹಾಗೂ ಹಿಂಸಾಚಾರ ನಡೆದರೂ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಯಿತು. 'ಜನರಲ್-ಜಿ' ಪೀಳಿಗೆಯ ಈ ಅಭೂತಪೂರ್ವ ಚಳವಳಿಗೆ ಮಣಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಅಂತಿಮವಾಗಿ ಪ್ರಧಾನಿ ಮೋದಿಯವರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಮೋದಿ ಸರ್ಕಾರಕ್ಕೆ ಮೊದಲ ಹಿನ್ನಡೆ ನೀಡಿದ್ದು ಎಂ.ಜೆ. ಅಕ್ಬರ್!
ಪ್ರಜಾಸತ್ತಾತ್ಮಕ ಹೋರಾಟ ಹಾಗೂ ಸಾರ್ವಜನಿಕ ಒತ್ತಡಕ್ಕೆ ಸಿಲುಕಿ ರಾಜೀನಾಮೆ ನೀಡಿದ ಮೋದಿ ಸರ್ಕಾರದ ಮೊದಲ ಸಚಿವ ಮೊಬಾಶಿರ್ ಜಾವೇದ್ ಅಕ್ಬರ್ (ಎಂ.ಜೆ. ಅಕ್ಬರ್). ಪ್ರಸಿದ್ಧ ಪತ್ರಕರ್ತರಾಗಿದ್ದ ಎಂ.ಜೆ. ಅಕ್ಬರ್, 'ದಿ ಟೆಲಿಗ್ರಾಫ್', 'ಏಷ್ಯನ್ ಏಜ್' ಮತ್ತು 'ಸಂಡೇ' ಪತ್ರಿಕೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಂತರ ರಾಜಕೀಯಕ್ಕೆ ಬಂದಿದ್ದರು.
2016ರಲ್ಲಿ ರಾಜ್ಯಸಭೆಗೆ ಆಯ್ಕೆ!
ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ್ದ ಅವರು, ಬಳಿಕ ಬಿಜೆಪಿ ಸೇರಿ 2016ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಆದರೆ, ಅಕ್ಟೋಬರ್ 2018ರಲ್ಲಿ ಭಾರತದಲ್ಲಿ ಕಾಲಿಟ್ಟ (ಮೀ-ಟೂ) ಚಳವಳಿ ಅವರ ರಾಜಕೀಯ ವೃತ್ತಿಜೀವನಕ್ಕೆ ಕಂಟಕವಾಯಿತು. ಸುಮಾರು 20ಕ್ಕೂ ಹೆಚ್ಚು ಮಹಿಳಾ ಪತ್ರಕರ್ತೆಯರು ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಅಸಭ್ಯ ವರ್ತನೆಯ ಗಂಭೀರ ಆರೋಪಗಳನ್ನು ಮಾಡಿದರು.
2018ರಲ್ಲಿ ರಾಜೀನಾಮೆ!
ಆರಂಭದಲ್ಲಿ ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿ, ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರೂ, ರಾಷ್ಟ್ರವ್ಯಾಪಿ ಪ್ರತಿಭಟನೆ ಮತ್ತು ಸರ್ಕಾರದ ಮೇಲಿನ ನೈತಿಕ ಒತ್ತಡ ತಾಳಲಾರದೆ ಅವರು ಅಕ್ಟೋಬರ್ 17, 2018 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಇತರ ನಾಯಕರ ರಾಜೀನಾಮೆಗೂ, ಇವರ ರಾಜೀನಾಮೆಗೂ ವ್ಯತ್ಯಾಸವೇನು?
ನರೇಂದ್ರ ಮೋದಿ ಅವರ ಸುದೀರ್ಘ ಆಡಳಿತಾವಧಿಯಲ್ಲಿ ರವಿಶಂಕರ್ ಪ್ರಸಾದ್, ಡಾ. ಹರ್ಷವರ್ಧನ್, ಹರ್ಸಿಮ್ರತ್ ಕೌರ್ ಬಾದಲ್ ಹಾಗೂ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸೇರಿದಂತೆ ಹಲವು ಸಚಿವರು ಹುದ್ದೆ ತೊರೆದಿದ್ದಾರೆ. ಆದರೆ ಅವರ್ಯಾರೂ ಸಾರ್ವಜನಿಕ ಚಳವಳಿಯ ನೇರ ಒತ್ತಡದಿಂದ ರಾಜೀನಾಮೆ ನೀಡಿದವರಲ್ಲ.
ಏನು ಹೇಳುತ್ತೆ ಇತಿಹಾಸ?
ಉದಾಹರಣೆಗೆ, ಹರ್ಸಿಮ್ರತ್ ಕೌರ್ ಬಾದಲ್ ಅವರು ರೈತ ಕಾಯ್ದೆಗಳ ಮೇಲಿನ ನೀತಿ ವ್ಯತ್ಯಾಸದಿಂದಾಗಿ ರಾಜೀನಾಮೆ ನೀಡಿದ್ದರೆ, ಉಳಿದವರನ್ನು ಆಡಳಿತಾತ್ಮಕ ವೈಫಲ್ಯ ಹಾಗೂ ಸಂಪುಟ ಪುನಾರಚನೆ ಕಾರಣಕ್ಕೆ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಆದರೆ, ಎಂ.ಜೆ. ಅಕ್ಬರ್ (2018) ಹಾಗೂ ಧರ್ಮೇಂದ್ರ ಪ್ರಧಾನ್ (2026) ಈ ಇಬ್ಬರು ನಾಯಕರು ಮಾತ್ರ ಜನರ ತೀವ್ರ ಆಕ್ರೋಶ ಮತ್ತು ಹೋರಾಟದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂದದ್ದು ಇತಿಹಾಸ.


