ಮಹಾ ಸರ್ಕಾರಕ್ಕೀಗ ಪೊಲೀಸ್‌ ವರ್ಗ ದಂಧೆ ಕಂಟಕ| ಗುಪ್ತಚರ ವರದಿ ಇದ್ದರೂ ಕ್ರಮ ಕೈಗೊಳ್ಳದ ಸಿಎಂ ಉದ್ಧವ್‌ ಠಾಕ್ರೆ| ಮಹಾ ಸರ್ಕಾರದ ವಿರುದ್ಧ ಕೇಂದ್ರಕ್ಕೆ ಮಾಜಿ ಸಿಎಂ ಫಡ್ನವೀಸ್‌ ದೂರು| ರಹಸ್ಯ ತನಿಖಾ ಮಾಹಿತಿಯ 6.3 ಜಿಬಿ ಡೇಟಾ ಹಸ್ತಾಂತರ

ನವದೆಹಲಿ/ಮುಂಬೈ(ಮಾ.24): ಮುಕೇಶ್‌ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಪ್ರಕರಣ, ಮನ್‌ಸುಖ್‌ ಹಿರೇನ್‌ ಹತ್ಯೆ, ಸ್ವತಃ ಗೃಹ ಸಚಿವರಿಂದಲೇ ಮಾಸಿಕ 100 ಕೋಟಿ ರು. ಹಫ್ತಾ ವಸೂಲಿಗೆ ಆದೇಶ, ಮುಂಬೈ ಡಿಜಿಪಿ ಪರಮ್‌ಬೀರ್‌ಸಿಂಗ್‌ ವರ್ಗದ ವಿವಾದದಲ್ಲಿ ಸಿಕ್ಕಿಬಿದ್ದಿರುವ ಶಿವಸೇನೆ ನೇತೃತ್ವದ ಮಹಾ ಅಘಾಡಿ ಸರ್ಕಾರಕ್ಕೀಗ ಹಿರಿಯ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ದಂಧೆಯ ಕಂಟಕ ಅಂಟಿಕೊಂಡಿದೆ.

ರಾಜ್ಯದಲ್ಲಿ ವರ್ಷಗಳ ಹಿಂದೆ ನಡೆದ ಇಂಥದ್ದೊಂದು ಹಗರಣದ ಕುರಿತು ಗುಪ್ತಚರ ಇಲಾಖೆ ವರದಿ ನೀಡಿದ್ದರೂ ಆ ಬಗ್ಗೆ ಹಾಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ 6.3 ಜಿಬಿ ಡೇಟಾವನ್ನೂ ಹಸ್ತಾಂತರಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಫಡ್ನವೀಸ್‌, ರಾಜ್ಯದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ದೊಡ್ಡ ದಂಧೆಯೇ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸುಳಿವು ಪಡೆದಿದ್ದ ಗುಪ್ತಚರ ಇಲಾಖೆಯ ಆಯುಕ್ತೆ ರಶ್ಮಿ ಶುಕ್ಲಾ ಅವರು, ಸರ್ಕಾರದ ಪೂರ್ವಾನುಮತಿ ಪಡೆದು ಐಪಿಎಸ್‌ ಅಧಿಕಾರಿಗಳು, ರಾಜಕಾರಣಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವರ ಫೋನ್‌ ಕದ್ದಾಲಿಕೆ ನಡೆಸಿದ್ದರು. ಈ ವೇಳೆ ಉನ್ನತ ಹುದ್ದೆಗಳಿಗೆ ವರ್ಗ ಮಾಡಲು ಭಾರೀ ಗೋಲ್‌ಮಾಲ್‌ ನಡೆಸಿದ್ದು ಸಾಬೀತಾಗಿದ್ದು, ಈ ಕುರಿತು ರಶ್ಮಿ ಅವರು 2020ರ ಆಗಸ್ಟ್‌ನಲ್ಲೇ ಸಿಎಂ ಠಾಕ್ರೆಗೆ ವರದಿ ನೀಡಿದ್ದರು.

ಆದರೆ ಇದುವರೆಗೆ ರಾಜ್ಯ ಸರ್ಕಾರದ ವರದಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ. ಹೀಗಾಗಿ ಈ ವರದಿಯ ಆಧಾರದಲ್ಲಿ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಹಗರಣದಲ್ಲಿ ಭಾಗಿಯಾಗಿದ್ದವರು ನಡೆಸಿದ ಫೋನ್‌ ಸಂಭಾಷಣೆ, ವಾಟ್ಸಾಪ್‌ ಸಂದೇಶಗಳು ಸೇರಿದಂತೆ 6.3 ಜಿಬಿಯಷ್ಟುಡಿಜಿಟಲ್‌ ಡಾಟಾ ತಮ್ಮ ಬಳಿಯೂ ಇದೆ ಎಂದು ಫಡ್ನವೀಸ್‌ ಹೇಳಿದ್ದಾರೆ.

ಈ ನಡುವೆ ಆರೋಪ ತಳ್ಳಿಹಾಕಿರುವ ಮೈತ್ರಿಸರ್ಕಾರದ ಭಾಗವಾಗಿರುವ ಎನ್‌ಸಿಪಿ, ಫಡ್ನವೀಸ್‌ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದಿದೆ.