ನವದೆಹಲಿ(ನ.12): ಒಂದು ಕಾಲದಲ್ಲಿ ಕೇವಲ ಎರಡೇ ಸ್ಥಾನಗಳನ್ನು ಹೊಂದಿದ್ದ, 2 ಕೋಣೆಗಳಿಂದ ಕಾರ್ಯನಿರ್ವಹಣೆ ಆರಂಭಿಸಿದ ಬಿಜೆಪಿ ಇಂದು ದೇಶದ ಮೂಲೆಮೂಲೆಗೂ ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇದೇ ವೇಳೆ, ಕುಟುಂಬಗಳು ನಡೆಸುವ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆಯಾಗಿವೆ ಎಂದು ಎಚ್ಚರಿಸಿದ್ದಾರೆ.

ಕೊರೋನಾ ಸೋಂಕು ಆರಂಭವಾದ ಬಳಿಕ ದೇಶದಲ್ಲಿ ನಡೆದ ಮೊತ್ತಮೊದಲ ಸಾರ್ವತ್ರಿಕ ಚುನಾವಣೆಯಾದ ಬಿಹಾರ ವಿಧಾನಸಭೆ ಮಹಾಸಮರದಲ್ಲಿ ನಿರೀಕ್ಷೆಗೂ ಮೀರಿ ಸಾಧಿಸಿದ ಗೆಲುವು ಹಾಗೂ ಕರ್ನಾಟಕ ಸೇರಿ 11 ರಾಜ್ಯಗಳ ಉಪಚುನಾವಣೆಗಳಲ್ಲಿನ ಜಯದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.

ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ಹಾಗೂ ಸಬ್‌ಕಾ ವಿಶ್ವಾಸ್‌ ಎಂಬುದು ಬಿಜೆಪಿ ವಿಜಯದ ಹಿಂದಿನ ಏಕೈಕ ಮಂತ್ರ. ಯಾರು ಪ್ರಾಮಾಣಿಕರಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತಾರೋ ಅವರನ್ನು ಮಾತ್ರವೇ ಬೆಂಬಲಿಸುತ್ತೇವೆ ಎಂಬುದನ್ನು ಬಿಹಾರ ಹಾಗೂ ಉಪಚುನಾವಣೆಗಳು ಸ್ಪಷ್ಟಪಡಿಸಿವೆ. 21ನೇ ಶತಮಾನದಲ್ಲಿ ಅಭಿವೃದ್ಧಿಯೊಂದೇ ರಾಷ್ಟ್ರ ರಾಜಕಾರಣದ ಆಧಾರವಾಗಿರಲಿದೆ ಎಂದು ಜನರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಪ್ರಜಾಸತ್ತಾತ್ಮಕವಾಗಿ ಹೋರಾಡಲು ಯಾರಿಂದ ಆಗುತ್ತಿಲ್ಲವೋ ಅವರು ಪಕ್ಷದ ಕಾರ್ಯಕರ್ತರ ಹತ್ಯೆಯಂತಹ ಕೃತ್ಯಗಳಿಗೆ ಕೈಹಾಕಿದ್ದಾರೆ. ಈ ರೀತಿ ಕೊಲ್ಲುವ ಆಟ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ. ಬಡವರು, ದಲಿತರು, ನಿರ್ಲಕ್ಷಿತರು ಪ್ರತಿನಿಧಿಸುವ ಏಕೈಕ ಪಕ್ಷ ಬಿಜೆಪಿ. ಪ್ರತಿಯೊಂದು ವರ್ಗ, ವಲಯದ ಅವಶ್ಯಕತೆಯನ್ನು ಅರ್ಥ ಮಾಡಿಕೊಳ್ಳುವ ಏಕೈಕ ಪಕ್ಷ ಬಿಜೆಪಿ. ಕೊರೋನಾ ಪಿಡುಗನ್ನು ನಾವು ನಿರ್ವಹಿಸಿದ ರೀತಿಯನ್ನು ಚುನಾವಣಾ ಫಲಿತಾಂಶ ಅನುಮೋದಿಸಿದೆ. ಜನರು ಉತ್ತಮ ಆಡಳಿತದ ಬಗ್ಗೆ ಚಿಂತನೆ ಮಾಡುವಾಗ ಬಿಜೆಪಿಯನ್ನು ನೆನೆಯುತ್ತಾರೆ ಎಂದು ತಿಳಿಸಿದರು.

ಚುನಾವಣಾಪೂರ್ವ ಸಮೀಕ್ಷೆಗಳು ಸುಳ್ಳಾಗಿದ್ದಕ್ಕೆ ಮೌನ ಮತದಾರರು ಕಾರಣ ಎಂದು ಹೇಳಲಾಗುತ್ತಿದೆ. ಆ ಮೌನಮತದಾರರು ಯಾರು? ನಮ್ಮ ತಾಯಂದಿರು, ಸೋದರಿಯರು. ಅವರ ಪರವಾಗಿ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಬುಧವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂಬ ಘೋಷಣೆಗಳು ಮುಗಿಲುಮುಟ್ಟಿದ್ದವು.

ಮಹಿಳೆಯರೇ ನಮ್ಮ ಮೌನ ಮತದಾರರು. ನಡ್ಡಾ ಅವರೇ ನೀವು ಮುಂದೆ ಸಾಗಿ, ನಿಮ್ಮ ಜತೆ ನಾವಿದ್ದೇವೆ. ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳದವರು ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.

- ನರೇಂದ್ರ ಮೋದಿ, ಪ್ರಧಾನಿ

ಕೊರೋನಾ ನಂತರ ನಡೆದ ದೇಶದ ಅತಿದೊಡ್ಡ ಚುನಾವಣೆ ಇದಾಗಿತ್ತು. ಬಿಹಾರದ ಜನತೆ ಗೂಂಡಾರಾಜ್‌ ಬದಲಿಗೆ ವಿಕಾಸ್‌ರಾಜ್‌ ಆಯ್ದುಕೊಂಡರು. ಲೂಟ್‌ ರಾಜ್‌ ಬದಲಿಗೆ ಡಿಬಿಟಿ (ನೇರ ನಗದು ವರ್ಗಾವಣೆ) ರಾಜ್‌ ಆಯ್ದುಕೊಂಡರು. ಕಂದೀಲು ಬದಲಿಗೆ ಎಲ್‌ಇಡಿ ದೀಪ ಆರಿಸಿಕೊಂಡರು.

- ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

ನಿತೀಶ್‌ಗೇ ಸಿಎಂ ಪಟ್ಟ: ಬಿಜೆಪಿ ಸ್ಪಷ್ಟನೆ -ದೀಪಾವಳಿ ಬಳಿಕ ಪ್ರಮಾಣ

ಪಟನಾ: ಚುನಾವಣೆಗೂ ಮೊದಲೇ ಘೋಷಿಸಿದ್ದಂತೆ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೇ ಈ ಬಾರಿಯೂ ಬಿಹಾರದ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ಬುಧವಾರ ಸ್ಪಷ್ಟಪಡಿಸಿದೆ. ಈ ಮೂಲಕ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾಗಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ. ‘ದೀಪಾವಳಿ ನಂತರ ನಿತೀಶ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ’ ಎಂದು ಜೆಡಿಯು ಮುಖಂಡ ಕೆ.ಸಿ. ತ್ಯಾಗಿ ಹೇಳಿದ್ದಾರೆ.