ನವದೆಹಲಿ(ನ.27): ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ ಹಾಗೂ ಹರ್ಯಾಣದ ಸಾವಿರಾರು ಮಂದಿ ರೈತರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಹೀಗಿರುವಾಗ ಪೊಲೀಸರು ಅವರನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಗೆ ತೆರಳುವ ಗಡಿ ಭಾಗದಲ್ಲಿರುವ ರಸ್ತೆಗಳಲ್ಲಿ ಗುಂಡಿಗಳನ್ನು ಕೊರೆದಿದ್ದು, ಈ ಮೂಲಕ ರೈತರು ತಮ್ಮ ವಾಹನದ ಮೂಲಕ ತೆರಳುವುದನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಇನ್ನು ಅನೇಕ ಕಡೆ ಪೊಲೀಸರು ರಸ್ತೆಗಳ ಮೇಲೆ ಬೃಹತ್ ಗುಂಡಿಗಳನ್ನಷ್ಟೇ ಅಲ್ಲದೇ, ದೊಡ್ಡ ದೊಡ್ಡ ಟ್ರಕ್‌ಗಳನ್ನೂ ಬ್ಯಾರಿಕೇಡ್‌ಗಳಂತೆ ಇರಿಸಿದ್ದಾರೆ. ಜೊತೆಗೆ ಮುಳ್ಳಿನ ತಂತಿಯನ್ನೂ ಹೆಣೆದಿದ್ದಾರೆ.

ಪಂಜಾಬ್ ಹರ್ಯಾಣ ಸೇರಿ ಒಟ್ಟು ಆರು ರಾಜ್ಯದ ಸುಮಾರು ಐನೂರು ಸಂಘಟನೆಗಳ ರೈತರು ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಹಾಗೂ ಸರ್ಕಾರದ ಬಳಿಕ ಇದನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. 

ಇನ್ನು ಪೊಲೀಸರು ರೈತರನ್ನು ಹತ್ತಿಕ್ಕಲು ಮರಳಿನಿಂದ ತುಂಬಿದ ಲಾರಿಗಳನ್ನೂ ಬ್ಯಾರಿಕೇಡ್‌ನಂತೆ ಬಳಸುತ್ತಿದ್ದಾರೆ. ರೈತರ ಈ ಹೋರಾಟ ಎರಡನೇ ದಿನ ತಲುಪಿದ್ದು, ನಿನ್ನೆಯಂತೆ ಇಂದೂ ಅವರನ್ನು ತಡೆಯಲು ಅಶ್ರವಾಯು ಹಾಗೂ ತಣ್ಣೀರಿನ ಪ್ರಯೋಗ ನಡೆಸಿದ್ದಾರೆ. ಇಷ್ಟೆಲ್ಲಾ ಕಷ್ಟಗಳಿದ್ದರೂ ಅನ್ನದಾತ ಮಾತ್ರ ಧೃತಿಗೆಡದೆ ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಮುಂದುವರೆಸಿದ್ದಾನೆ.