ನವದೆಹಲಿ[ಡಿ.03]: ರಸೆ ಅಪಘಾತಗಳನ್ನು ನಿಯಂತ್ರಿಸಲು ಸಾರಿಗೆ ನಿಮಯ ಉಲ್ಲಂಘನೆಗೆ ಭಾರೀ ದಂಡ ವಿಧಿಸುವ ನೂತನ ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಆದರೆ, ಈ ಕಾಯ್ದೆಯಿಂದ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಇಳಿಕೆ ಆಗಿಲ್ಲ ಎಂದಬುದನ್ನು ಸ್ವತಃ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಒಪ್ಪಿಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನೂತನ ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ಅಂತಹ ಮಹತ್ವದ ಬದಲಾವಣೆಗಳು ಆಗಿಲ್ಲ ಎಂದು ಹೇಳಲು ಬೇಸರವಾಗುತ್ತಿದೆ. 2019ರ ಜನವರಿಯಿಂದ- ಸೆಪ್ಟೆಂಬರ್‌ ಅವಧಿಯಲ್ಲಿ 3.39 ಲಕ್ಷ ಅಪಘಾತಗಳು ಸಂಭವಿಸಿದ್ದು, 1,12,735 ಜನರು ಸಾವಿಗೀಡಾಗಿದ್ದಾರೆ ಮತ್ತು 3.45 ಲಕ್ಷ ಜನರು ಗಾಯಗೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಪಘಾತಗಳ ಸಂಖ್ಯೆಯಲ್ಲಿ ಶೇ.2.2ರಷ್ಟುಇಳಿಕೆಯಾಗಿದ್ದರೂ, ಸಾವಿನ ಸಂಖ್ಯೆಯಲ್ಲಿ ಶೇ.0.2ರಷ್ಟುಹೆಚ್ಚಳವಾಗಿದೆ ಎಂದಿದ್ದಾರೆ.

2018ನೇ ಸಾಲಿನ ವರದಿಗೆ ಹೋಲಿಸಿದರೆ ರಸ್ತೆ ಅಪಘಾತ ಪ್ರಮಾಣದಲ್ಲಿ ಶೇ.2.2ರಷ್ಟುಇಳಿಕೆಯಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ದೇಶದಲ್ಲಿ 3.46 ಲಕ್ಷ ಅಪಘಾತಗಳು ಸಂಭವಿಸಿತ್ತು. 1,12,469 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 3.55 ಲಕ್ಷ ಮಂದಿ ಗಾಯಳುವಾಗಿದ್ದರು ಎಂದು ಹೇಳಿದ್ದಾರೆ.