ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್‌ ಬಳಿಯಿರುವ ಮುಸ್ಲಿಂ ಬಾಹುಳ್ಯದ ಫಕೀರ್‌ ಕಾಲೋನಿ ಮತ್ತು ವಸೀಮ್‌ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಧ್ವಂಸಗೊಳಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ

 ತಿರುವನಂತಪುರಂ : ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್‌ ಬಳಿಯಿರುವ ಮುಸ್ಲಿಂ ಬಾಹುಳ್ಯದ ಫಕೀರ್‌ ಕಾಲೋನಿ ಮತ್ತು ವಸೀಮ್‌ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಧ್ವಂಸಗೊಳಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ. ‘ಕರ್ನಾಟಕ ಸರ್ಕಾರ ಬುಲ್ಡೋಜರ್‌ ನ್ಯಾಯ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತದ ರೀತಿ ಬುಲ್ಡೋಜರ್‌ ನ್ಯಾಯ

ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ‘ಉತ್ತರ ಭಾರತದಲ್ಲಿ ಹಿಂದೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ರಾಜಕೀಯ ದಾಳಿ ಈಗ ದಕ್ಷಿಣಕ್ಕೂ ಹರಡುತ್ತಿದೆ ಎಂಬುದನ್ನು ಈ ಘಟನೆಯು ಬಿಂಬಿಸುತ್ತದೆ. ತೀವ್ರ ಚಳಿಯ ನಡುವೆಯೂ ಇಡೀ ಕುಟುಂಬಗಳನ್ನು ತಮ್ಮ ಮನೆಗಳಿಂದ ಬೀದಿಗೆ ತಳ್ಳಲಾಯಿತು. ಅಲ್ಲಿನ ನಿವಾಸಿಗಳಿಗೆ ಅಲ್ಲಿಂದ ಹೋಗುವುದು ಬಿಟ್ಟು ಬೇರೆ ದಾರಿಯಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಈ ವಿಚಾರದಲ್ಲಿ ಬುಲ್ಡೋಜರ್‌ ನ್ಯಾಯ ಅನುಸರಿಸಿತು’ ಎಂದು ಆರೋಪಿಸಿದ್ದಾರೆ.

ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ

‘ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲುತ್ತೇನೆ ಎಂದು ಹೇಳುವ ಪಕ್ಷ ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?’ ಎಂದು ಅವರು ಕಾಂಗ್ರೆಸ್‌ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಕಳೆದ ವಾರ ಕರ್ನಾಟಕ ಸರ್ಕಾರ, ಯಲಹಂಕದ ಕೋಗಿಲು ಲೇಔಟ್‌ ಬಳಿಯ ಫಕೀರ್‌ ಕಾಲೋನಿ ಮತ್ತು ವಸೀಮ್‌ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 200ಕ್ಕೂ ಹೆಚ್ಚು ಮನೆಗಳನ್ನು ಕೆಡವಿತ್ತು. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆಂದು ಗುರುತಿಸಿದ ಭೂಮಿಯನ್ನು ಅತಿಕ್ರಮಣ ಮಾಡಿದ್ದ ಆರೋಪವಿದ್ದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿತ್ತು.