ನವದೆಹಲಿ(ಏ.03):: ರಾಷ್ಟ್ರ ರಾಜಧಾನಿ ದೆಹಲಿಗೆ ಕೊರೋನಾ ವೈರಸ್‌ನ 4ನೇ ಅಲೆಯ ಸಂಕಷ್ಟಎದುರಾಗಿದೆ. ಆದಾಗ್ಯೂ ಸೋಂಕು ಹಬ್ಬುವಿಕೆಯ ನಿಯಂತ್ರಣಕ್ಕೆ ಲಾಕ್‌ಡೌನ್‌ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ ಲಸಿಕೆ ಪಡೆಯಲು ಇರುವ ವಯೋಮಿತಿಯನ್ನು ರದ್ದುಗೊಳಿಸುವ ಮೂಲಕ ಎಲ್ಲಾ ವಯೋಮಾನದವರಿಗೆ ಕೊರೋನಾ ಲಸಿಕೆ ನೀಡಲು ರಾಜ್ಯಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಕೇಜ್ರಿವಾಲ್‌ ಅವರು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ಕೊರೋನಾದ 4ನೇ ಅಲೆಯು ಈ ಹಿಂದಿನ ವೈರಸ್‌ನಷ್ಟುಅಪಾಯಕಾರಿಯಾಗಿಲ್ಲ. ಹೀಗಾಗಿ ಲಾಕ್‌ಡೌನ್‌ ಅಗತ್ಯವಿಲ್ಲ. ಒಂದು ವೇಳೆ ಅಗತ್ಯಬಿದ್ದರೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಲಾಕ್‌ಡೌನ್‌ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದ 4 ಜಿಲ್ಲೆಗಳು ಲಾಕ್‌

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 4 ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮಧ್ಯಪ್ರದೇಶ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಛಿಂದ್ವಾರಾ, ರತ್ಲಂ ನಗರದಲ್ಲಿ ಗುರುವಾರ ರಾತ್ರಿಯಿಂದ ಲಾಕ್‌ಡೌನ್‌ ಜಾರಿಯಾಗಿದ್ದು, ಏ.5ರ ಬೆಳಗ್ಗೆ 6ರವರೆಗೆ ಇರಲಿದೆ. ಇಡೀ ಬೇತುಲ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 10ರಿಂದ, ಖಾರ್ಗೋನ್‌ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ 8ರಿಂದ ಲಾಕ್‌ಡೌನ್‌ ಜಾರಿಗೆ ಬಂದಿದ್ದು, ಏ.5ರ ಬೆಳಗ್ಗೆ 6ರವರೆಗೆ ನಿರ್ಬಂಧ ಇರುತ್ತವೆ.