ನವದೆಹಲಿ(ಜ.26): ಹಲವು ತಿಂಗಳ ಕಾಲ ಅತಿ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುವ ಮೂಲಕ ಭೀತಿಗೆ ಗುರಿಯಾಗಿದ್ದ ರಾಜಧಾನಿ ದೆಹಲಿ, ಇದೀಗ ಹರ್ಡ್‌ ಇಮ್ಯುನಿಟಿಯತ್ತ ಹೆಜ್ಜೆ ಇಟ್ಟಿರುವ ಶುಭ ಸುದ್ದಿ ಹೊರಬಿದ್ದಿದೆ. ರಾಜಧಾನಿಯಲ್ಲಿ ಇತ್ತೀಚೆಗೆ ನಡೆಸಲಾದ 5ನೇ ಹಂತದ ಸೆರೋ ಸರ್ವೇಯಲ್ಲಿ ಈ ಸುಳಿವು ಸಿಕ್ಕಿದೆ.

ನವದೆಹಲಿಯ 11 ಜಿಲ್ಲೆಗಳ ವ್ಯಾಪ್ತಿಯ 25000ಕ್ಕೂ ಹೆಚ್ಚು ಜನರನ್ನು ಇತ್ತೀಚೆಗೆ ರೋಗ ನಿರೋಧಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಒಂದು ಜಿಲ್ಲೆಯಲ್ಲಿ ಶೇ.50-60ರಷ್ಟುಜನರ ದೇಹದಲ್ಲಿ ರೋಗನಿರೋಧಕ ಶಕ್ತಿ ಪತ್ತೆಯಾಗಿದೆ. ಇದು ನಗರ ಹರ್ಡ್‌ ಇಮ್ಯುನಿಟಿ (ಸಾಮೂಹಿಕ ರೋಗ ನಿರೋಧಕ ಶಕ್ತಿ)ಯತ್ತ ಸಾಗುತ್ತಿರುವುದರ ಸುಳಿವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರದೇಶವೊಂದರಲ್ಲಿ ಶೇ.50-60ರಷ್ಟುಜನರಲ್ಲಿ ರೋಗ ನಿರೋಧಕ ಶಕ್ತಿ ಪತ್ತೆಯಾದರೆ ಅದು ಹರ್ಡ್‌ ಇಮ್ಯುನಿಟಿಯ ಸಂಕೇತ ಎಂಬುದು ತಜ್ಞರ ಹೇಳಿಕೆ.

ಹೀಗೆ ಹರ್ಡ್‌ ಇಮ್ಯುನಿಟಿ ಅಭಿವೃದ್ಧಿಯಾಗಿರುವ ಪ್ರದೇಶದಲ್ಲಿ ಬಹುತೇಕ ಜನರಿಗೆ ತಮಗೆ ಸೋಂಕು ಬಂದು ಹೋದ ವಿಷಯವೇ ಅರಿವಿಗೆ ಬಂದಿರುವುದಿಲ್ಲ. ಜೊತೆಗೆ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾದ ಕಾರಣ, ಅವರು ಮತ್ತೆ ತಕ್ಷಣಕ್ಕೆ ಸೋಂಕಿಗೆ ತುತ್ತಾಗುವ ಸಾಧ್ಯತೆಯೂ ಇರುವುದಿಲ್ಲ. ಇಂಥವರ ಪ್ರಮಾಣ ಹೆಚ್ಚಾದಾಗ, ಸಹಜವಾಗಿಯೇ ಆ ಪ್ರದೇಶದಲ್ಲಿ ಸೋಂಕು ಹರಡುವಿಕೆ ಸ್ಥಗಿತಗೊಳ್ಳುತ್ತದೆ.

2 ಕೋಟಿ ಜನಸಂಖ್ಯೆಯ ದೆಹಲಿಯಲ್ಲಿ ಈವರೆಗೆ 6.33 ಲಕ್ಷ ಜನರಿಗೆ ಸೋಂಕು ತಗುಲಿದ್ದು, 10,808 ಜನರು ಸಾವನ್ನಪ್ಪಿದ್ದಾರೆ.