ನವದೆಹಲಿ(ಜೂ.07): ಸರ್ಕಾರಿ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವಂತೆ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದ 75 ವರ್ಷದ ಕೊರೋನಾ ರೋಗಿಯೊಬ್ಬರು, ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಿಧನ ಹೊಂದಿದ ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ.

ವೈದ್ಯಕೀಯ ತಪಾಸಣೆಗೆ 75 ವರ್ಷದ ಮೋತಿ ರಾಮ್‌ ಗೋಯಲ್‌ ಎಂಬುವರು ನರ್ಸಿಂಗ್‌ ಹೋಂಗೆ ಹೋಗಿದ್ದಾಗ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕುಟುಂಬ ವರ್ಗ ಪ್ರಯತ್ನಿಸಿತ್ತು. 4 ಆಸ್ಪತ್ರೆಗಳಿಗೆ ಹೋದಾಗ ‘ಬೆಡ್‌ ಖಾಲಿ ಇಲ್ಲ’ ಎಂಬ ಕಾರಣ ನೀಡಿ ದಾಖಲಾತಿ ನಿರಾಕರಿಸಲಾಯಿತು.

ಈ ಹಿನ್ನೆಲೆಯಲ್ಲಿ ಅವರು ಜೂ.2ರಂದು ಕೋರ್ಟ್‌ ಮೆಟ್ಟಿಲೇರಿದ್ದರು. ಜೂ.3ರಂದು 11ಕ್ಕೆ ವಿಚಾರಣೆ ನಿಗದಿಯಾಗಿತ್ತು. ಜೂ.2ರಂದೇ ಅವರು ನಿಧನರಾದರು. ಮೋತಿ ರಾಮ್‌ ಕುಟುಂಬ ಸೈಕಲ್‌ ರಿಪೇರಿ ಅಂಗಡಿ ನಡೆಸುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಷ್ಟುಹಣ ಇಲ್ಲ.