* : ದೆಹಲಿ ಮತ್ತು ರಾಷ್ಟ್ರ ರಾಜಧಾನಿ, ಎನ್‌ಸಿಆರ್‌ ಜನರಲ್ಲಿ ಕಳೆದ 15 ದಿನಗಳಿಂದ ಕೊರೋನಾ ಸೋಂಕು* ಕೇವಲ 2 ವಾರದಲ್ಲಿ ಪಾಸಿಟಿವಿಟಿ ದರ 0.5%ನಿಂದ 5.33%ಗೆ ಹೆಚ್ಚಳ* ಕೊವಿಡ್‌ ಹರಡುವಿಕೆ ಪ್ರಮಾಣ ಶೇ.500ರಷ್ಟು ಏರಿಕೆ

ನವದೆಹಲಿ(ಏ.18): ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌)ದ ಜನರಲ್ಲಿ ಕಳೆದ 15 ದಿನಗಳಿಂದ ಕೊರೋನಾ ಸೋಂಕು ಹರಡುತ್ತಿರುವ ಪ್ರಮಾಣ ಶೇ.500ರಷ್ಟುಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ಎಚ್ಚರಿಸಿದೆ.

ಲೋಕಲ್‌ ಸರ್ಕಲ್‌ ನಡೆಸಿದ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಶೇ.19ರಷ್ಟುದೆಹಲಿ ಮತ್ತು ಎನ್‌ಸಿಆರ್‌ ನಿವಾಸಿಗಳು, ಕಳೆದ 15 ದಿನಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾದ ವ್ಯಕ್ತಿಗಳು ತಮ್ಮೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಸುಮಾರು 11,743 ನಿವಾಸಿಗಳಿಂದ ಮಾಹಿತಿ ಕಲೆಹಾಕಲಾಗಿದೆ. ಈ ವೇಳೆ ಕಳೆದ 15 ದಿನಗಳಲ್ಲಿ ಸೋಂಕಿಗೆ ತುತ್ತಾದ ಎಷ್ಟುಜನರು ನಿಮ್ಮ ನಿಕಟವರ್ತಿಗಳು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಶೇ.70ರಷ್ಟುಜನರು ಕಳೆದ 15 ದಿನಗಳ ಸೋಂಕಿತರ ಪೈಕಿ ಯಾರೂ ಗೊತ್ತಿಲ್ಲ ಎಂದು ಹೇಳಿದರೆ, ಶೇ.19ರಷ್ಟುಜನರು ಸೋಂಕಿತರ ಪೈಕಿ ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ನೇರ ಅಥವಾ ಹತ್ತಿರದ ಸಂಪರ್ಕಿತರು ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ಪ್ರಶ್ನೆಯನ್ನು ಏ.2ರ ಸಮೀಕ್ಷೆಯಲ್ಲೂ ಕೇಳಲಾಗಿತ್ತು. ಆಗ ಶೇ.3ರಷ್ಟುಜನರು ಮಾತ್ರ ಕಳೆದ 15 ದಿನಗಳಲ್ಲಿ ಸೋಂಕಿಗೆ ತುತ್ತಾದ ರೋಗಿಗಳ ಸಂಪರ್ಕಿತರಾಗಿದ್ದರು.

ಈ ಮಧ್ಯೆ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಶನಿವಾರ 461 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ತನ್ಮೂಲಕ ಪಾಸಿಟಿವಿಟಿ ದರ ಕಳೆದ ಎರಡು ವಾರಗಳಲ್ಲಿ ಶೇ.0.5ರಿಂದ ಶೇ.5.33ಕ್ಕೆ ಏರಿಕೆಯಾಗಿದೆ.

ದಿಲ್ಲಿ ಪಕ್ಕದ ಗೌತಮ ಬುದ್ಧನಗರದಲ್ಲಿ ಕಳೆದ 7 ದಿನಗಳಿಂದ 44 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ನೊಯ್ಡಾ ಪ್ರದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ 167ಕ್ಕೆ ಏರಿಕೆಯಾಗಿದೆ.

ಗುರುಗ್ರಾಮದಲ್ಲಿ ಸೋಂಕು ಶೇ.9ರಷ್ಟುಹೆಚ್ಚಾಗಿದ್ದು, ಕಳೆದ 4 ದಿನಗಳಿಂದ ನಗರದಲ್ಲಿ 100ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಶುಕ್ರವಾರ 150 ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳು 589ಕ್ಕೆ ಏರಿಕೆಯಾಗಿದೆ.

ಇಡೀ ಶಾಲೆ ಮುಚ್ಚಲ್ಲ- ಸಿಸೋಡಿಯಾ:

ಶಾಲೆಗಳಲ್ಲಿ ಸೋಂಕು ಕಾಣಿಸಿಕೊಂಡರೆ ಇಡೀ ಶಾಲೆಯನ್ನು ಮುಚ್ಚುವುದಿಲ್ಲ. ಸಂಬಂಧಿಸಿದ ತರಗತಿ ಅಥವಾ ನಿರ್ದಿಷ್ಟಪ್ರದೇಶವನ್ನು ಮುಚ್ಚಲಾಗುತ್ತದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಶುಕ್ರವಾರ ಹೇಳಿದ್ದಾರೆ.

‘ನಾವು ಶಾಲೆಗಳನ್ನು ಮುಚ್ಚುವಂತೆ ಸೂಚನೆ ನೀಡಿಲ್ಲ. ನಿರ್ದಿಷ್ಟಪ್ರದೇಶ ಅಥವಾ ತರಗತಿಯನ್ನು ಮುಚ್ಚುವಂತೆ ಮಾತ್ರ ನಿರ್ದೇಶನ ನೀಡಲಾಗಿದೆ. ಶಾಲೆ ಸಿಬ್ಬಂದಿಗಳು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡರೆ ಮಾತ್ರ ಶಾಲೆಯನ್ನು ಮುಚ್ಚಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.