7ನೇ ಬಾರಿ ಇಡಿ ವಿಚಾರಣೆಯಿಂದ ತಪ್ಪಿಸಿಕೊಂಡ ಸಿಎಂ ಕೇಜ್ರಿವಾಲ್, ಹೊಸ ದಾಳ ಉರುಳಿಸಿದ ಆಪ್!
ದಿಲ್ಲಿ ಅಬಕಾರಿ ಹಗರಣ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಡಿ 7ನೇ ಬಾರಿಗೆ ಸಲ್ಲಿಸಿದ ಸಮನ್ಸ್‌ಗೂ ಸಿಎಂ ಅರವಿಂದ್ ಕೇಜ್ರಿವಾಲ್ ಗೈರಾಗಿದ್ದಾರೆ. ಈ ಬಾರಿ ಆಪ್ ನಾಯಕ ಹೊಸ ದಾಳ ಉರುಳಿಸಿದ್ದು ಇಡಿ ಅಧಿಕಾರಿಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ನವದೆಹಲಿ(ಫೆ.26) ಜಾರಿ ನಿರ್ದೇಶನಾಲಯ(ಇಡಿ) ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ಹೋರಾಟ ತೀವ್ರಗೊಳ್ಳುತ್ತಿದೆ. ದಿಲ್ಲಿ ಅಬಕಾರಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆಗೆ ಹಾಜರಾಗಲು ಇಡಿ ಒಂದರ ಮೇಲೊಂದರಂತೆ ಸಮನ್ಸ್ ನೀಡುತ್ತಲೇ ಇದೆ. ಸಮನ್ಸ್ ಪಡೆದು ಅರವಿಂದ್ ಕೇಜ್ರಿವಾಲ್ ಹಲವು ಕಾರಣಗಳನ್ನು ಮುಂದಿಟ್ಟು ಗೈರಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು 7ನೇ ಸಮನ್ಸ್ ನೀಡಿದ್ದರು. ಈ ಬಾರಿ ಅರವಿಂದ್ ಕೇಜ್ರಿವಾಲ್ ಹಾಜರಾಗುವ ಸಾಧ್ಯತೆ ಎಂದೇ ಹೇಳಲಾಗುತ್ತಿತ್ತು. ಆದರೆ ಕೇಜ್ರಿವಾಲ್ 7ನೇ ಬಾರಿಗೂ ವಿಚಾರಣೆಗೆ ಗೈರಾಗಿದ್ದಾರೆ. ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿರುವ ಕಾರಣ ತೀರ್ಪು ಬಂದ ಬಳಿಕ ನಿರ್ಧರಿಸುವುದಾಗಿ ಆಪ್ ಹೇಳಿದೆ.
ಫೆ.19ರಂದು ವಿಚಾರಣೆಗೆ ಗೈರಾದ ಕಾರಣ 7ನೇ ಸಮನ್ಸ್ ಜಾರಿ ಮಾಡಲಾಗಿತ್ತು. 6ನೇ ಬಾರಿಯೂ ವಿಚಾರಣೆಗೆ ಗೈರಾದ ಬೆನ್ನಲ್ಲೇ ಇಡಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಸತತ ಸಮನ್ಸ್ ನೀಡುತ್ತಿದ್ದರೂ ಪ್ರತಿ ಬಾರಿ ಕಾಣಗಳನ್ನು ಹೇಳಿ ಮುಂದೂಡುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ಆಪ್ ನಾಯಕನ ನಡೆಯನ್ನು ಪ್ರಶ್ನಿಸಿತ್ತು. ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ಅರ್ಜಿಯ ತೀರ್ಪು ಹೊರಬಂದ ಬಳಿಕ ನಿರ್ಧರಿಸುವುದಾಗಿ ಕೇಜ್ರಿವಾಲ್ ಇದೀಗ ಹೊಸ ದಾಳ ಉರುಳಿಸಿದ್ದಾರೆ.
ದಿಲ್ಲಿ ಸರ್ಕಾರ ನಡೆಸುವ ನನಗೆ ನೊಬೆಲ್ ಪ್ರಶಸ್ತಿ ಕೊಡಬೇಕು, ಸಿಎಂ ಕೇಜ್ರಿವಾಲ್ ವಿಭಿನ್ನ ಆಗ್ರಹ!
‘ನಾವು ಕಾನೂನಿನ ಪ್ರಕಾರವಾಗಿ ಉತ್ತರಿಸುತ್ತೇವೆ. ಇ.ಡಿಯು ನ್ಯಾಯಾಲಯದ ಮೊರೆ ಹೋಗಿದೆ. ಅದು ನ್ಯಾಯಾಲಯದ ತೀರ್ಪು ಬರುವವರೆಗೂ ನನಗೆ ಮತ್ತೆ ಹೊಸ ಸಮನ್ಸ್ ನೀಡಬಾರದು. ಅಲ್ಲಿವರೆಗೆ ಕಾಯಬೇಕು’ ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಗೈರಾಗುವ ಕುರಿತು ಇಡಿ ಅಧಿಕಾರಿಗಳು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ಮುಂದಿನ ವಿಚಾರಣೆ ಮಾರ್ಚ್ 17ಕ್ಕೆ ನಡೆಯಲಿದೆ. ಹೀಗಾಗಿ ಇಡಿ ಅಧಿಕಾರಿಗಳು ಇದೀಗ ಕನಿಷ್ಠ ಮಾರ್ಚ್ 17ರ ವರೆಗೆ ಕಾಯಬೇಕಾಗಿದೆ. ಇತ್ತ ಇದರ ನಡುವೆ ಮತ್ತೊಂದು ಸಮನ್ಸ್ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ದಿಲ್ಲಿ ಅಬಕಾರಿ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು 2023ರ ನವೆಬಂರ್ 2 ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮೊದಲ ಸಮನ್ಸ್ ನೀಡಿತ್ತು. ಡಿಸೆಂಬರ್ 21ಕ್ಕೆ 2ನೇ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 18, ಫೆಬ್ರವರಿ 2 ಹಾಗೂ ಫೆಬ್ರವರಿ 19 ರಂದು ಸಮನ್ಸ್ ನೀಡಿತ್ತು. ಫೆ.26ರಂದು ವಿಚಾರಣೆಗೆ ಹಾಜರಾಗುವಂತೆ 7ನೇ ಸಮನ್ಸ್ ನೀಡಲಾಗಿತ್ತು.
ಮೋದಿ ಡಿಗ್ರಿ ಪ್ರಶ್ನಿಸಿದ ಕೇಜ್ರಿವಾಲ್‌ಗೆ ಹಿನ್ನಡೆ, ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್!
ಪ್ರತಿ ಇಡಿ ಸಮನ್ಸ್‌ಗೆ ಗೈರಾದ ಬೆನ್ನಲ್ಲೇ ಆಪ್ ನಾಯಕರು ಇಡಿ ಹಾಗೂ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ‘ಸಿಎಂ ಕೇಜ್ರಿವಾಲ್ ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಂಧಿಸಲು ಇ.ಡಿ ಹೊಂಚು ಹಾಕಿದೆ ಹಾಗೂ ಇದಕ್ಕೆ ಬಿಜೆಪಿಯ ಕುಮ್ಮಕ್ಕಿದೆ. ಕೇಜ್ರಿವಾಲ್, ವಿಚಾರಣೆಗೆ ಹಾಜರಾಗುವುದಿಲ್ಲ’ ಎಂದು ಆಪ್ ನಾಯಕರು ಮತ್ತೆ ಮತ್ತೆ ಕಿಡಿ ಕಾರಿದ್ದರು.