ಆಪ್ ಬಳಿಕ ಬಿಆರ್‌ಎಸ್‌ಗೆ ದೆಹಲಿ ಅಬಕಾರಿ ಅಕ್ರಮ ಸಂಕಷ್ಟ, ಇಡಿ ದಾಳಿ ಬೆನ್ನಲ್ಲೇ ಕೆ ಕವಿತಾ ಅರೆಸ್ಟ್ !
ದೆಹಲಿ ಅಬಕಾರಿ ಪ್ರಕರಣದಲ್ಲಿ ಇದೀಗ ಇಡಿ ಅಧಿಕಾರಿಗಳು ಬಿಆರ್‌ಎಸ್ ನಾಯಕ ಕೆ ಕವಿತಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಇಡಿ ಅಧಿಕಾರಿಗಳು ಇದೀಗ ಕೆ ಕವಿತಾ ಅವರನ್ನು ದೆಹಲಿಗೆ ಕರೆತರುತ್ತಿದ್ದಾರೆ.
ನವದೆಹಲಿ(ಮಾ.15) ದೆಹಲಿ ಅಬಕಾರಿ ಅಕ್ರಮದ ತನಿಖೆಗೆ ಚುರುಕುಗೊಳ್ಳುತ್ತಿದ್ದಂತೆ ದಕ್ಷಿಣ ತೆಲಂಗಾಣದಲ್ಲಿರುವ ಬಿಆರ್‌ಎಸ್ ಪಕ್ಷದ ನಾಯಕರ ಸಂಕಷ್ಟ ಹೆಚ್ಚಾಗುತ್ತಿದೆ. ಈಗಾಗಲೇ ಇಡಿ ಸಮನ್ಸ್ ಪಡೆದಿದ್ದ ಬಿಆರ್‌ಎಸ್ ನಾಯಕಿ, ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಪುತ್ರಿ ಕೆ ಕವಿತಾ ಅವರನ್ನು ಇಡಿ ವಶಕ್ಕೆ ಪಡೆದಿದೆ. ದೆಹಲಿ ಅಬಕಾರಿ ಹಗರಣ ಸಂಬಂಧ ಕೆ ಕವಿತಾ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಇದೀಗ ಕವಿತಾ ಅವರನ್ನು ವಶಕ್ಕೆ ಪಡೆದಿದೆ.
ದೆಹಲಿ ಅಬಕಾರಿ ಹಗರಣ ಸಂಬಂಧ ಇಡಿ ಅಧಿಕಾರಿಗಳು ಈಗಾಗಲೇ 2 ಬಾರಿ ವಿಚಾರಣೆ ನಡೆಸಿದ್ದಾರೆ. 2023ರ ಮಾರ್ಚ್ 11 ರಂದು ಮೊದಲ ಬಾರಿಗೆ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಸತತ 9 ಗಂಟೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇದಾದ ಬಳಿಕ ಅದೇ ತಿಂಗಳ ಮಾರ್ಚ್ 20 ರಂದು ದೆಹಲಿಯ ಕಚೇರಿಯಲ್ಲಿ ಸತತ 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಬೆಳಗ್ಗೆ 10.30 ರಿಂದ ರಾತ್ರಿ 8.45ರ ವರೆಗೆ ವಿಚಾರೆ ನಡೆಸಿ ಉತ್ತರ ದಾಖಲಿಸಿದ್ದರು.
7ನೇ ಬಾರಿ ಇಡಿ ವಿಚಾರಣೆಯಿಂದ ತಪ್ಪಿಸಿಕೊಂಡ ಸಿಎಂ ಕೇಜ್ರಿವಾಲ್, ಹೊಸ ದಾಳ ಉರುಳಿಸಿದ ಆಪ್!
ಈ ವಿಚಾರಣೆ ಬಳಿಕ ಮತ್ತೆ ಇಡಿ ಅಧಿಕಾರಿಗಳು ಇತ್ತೀಚೆಗೆ ಸಮನ್ಸ್ ನೀಡಿದ್ದರು. ವಿಚಾರಣೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು. ಆದರೆ ಲೋಕಸಭಾ ಚುನಾವಣೆ ಕಾರಣದಿಂದ ರಾಜ್ಯದಿಂದ ದೆಹಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಪ್ರಕರಣ ನ್ಯಾಯಲಯದಲ್ಲಿರುವ ಕಾರಣ ವಿಚಾರಣೆಗೆ ಗೈರಾಗುತ್ತಿದ್ದೇನೆ. ವಿಚಾರಣೆ ನೋಟಿಸ್ ರದ್ದು ಮಾಡಬೇಕು ಎಂದು ಕೆ ಕವಿತಾ ಇಡಿ ಅದಿಕಾರಿಗಳಿಗೆ ಪೈತ್ರ ಬರೆದಿದ್ದರು.
2023ರ ಡಿಸೆಂಬರ್ ತಿಂಗಳಲ್ಲಿ ಕವಿತಾ ಅವರನ್ನು ಅವರ ನಿವಾಸದಲ್ಲೇ ವಿಚಾರಣೆ ನಡೆಸಲಾಗಿತ್ತು. ಇದೀಗ ನಿವಾಸದ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಹಲವು ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಕವಿತಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕವಿತಾ ವಶಕ್ಕೆ ಪಡೆದ ಬೆನ್ನಲ್ಲೇ ರಾಜಕೀಯ ಜೋರಾಗಿದೆ. ಪ್ರಕರಣ ನ್ಯಾಯಲಯದಲ್ಲಿದೆ. ಹೀಗಿರುವಾಗ ಇಡಿ ಅಧಿಕಾರಿಗಳು ಯಾವ ಆಧಾರದಲ್ಲಿ ವಶಕ್ಕೆ ಪಡೆದಿದ್ದಾರೆ? ಇದು ಕಾನೂನು ಉಲ್ಲಂಘನೆಯಾಗಿದೆ ಎಂದು ಕೆ ಕವಿತಾ ಹೇಳಿದ್ದಾರೆ. ನಿವಾಸದ ಮೇಲೆ ದಾಳಿ ಮಾಡಿ ಕೆಲ ದಾಖಲೆಗಳನ್ನು ಕೇಳಿದ್ದಾರೆ. ಅವರ ತನಿಖೆಗೆ ಎಲ್ಲಾ ಸಹಕಾರ ನೀಡಿದ್ದೇನೆ. ಇದರ ನಡುವೆ ವಶಕ್ಕೆ ಪಡೆಯುವ ಪ್ರಮೇಯ ಇರಲಿಲ್ಲ ಎಂದು ಕವಿತಾ ರೆಡ್ಡಿ ಹೇಳಿದ್ದಾರೆ.
ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ
ಇತ್ತ ತೆಲಂಗಾಣ ಬಿಜೆಪಿ ಕೆ ಕವಿತಾಗೆ ತಿರುಗೇಟು ನೀಡಿದೆ. ಕೆ ಕವಿತಾ ಮೇಲೆ ಪ್ರಕರಣಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಕುರಿತು ಕೆ ಕವಿತಾ ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಇಲ್ಲಿ ಉಲ್ಲಂಘನೆ ಪ್ರಶ್ನೆ ಇಲ್ಲ. ತಪ್ಪು ಮಾಡಿಲ್ಲ ಎಂದಾದರೆ ಧೈರ್ಯವಾಗಿ ಎದುರಿಸಿ ಎಂದು ಬಿಜೆಪಿ ಹೇಳಿದೆ.