ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್: ಮೆಟ್ರೋಗೂ ಬ್ರೇಕ್!
* ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಅಬ್ಬರ
* ಮತ್ತೊಂದು ವಾರ್ ಲಾಕ್ ಡೌನ್ ವಿಸ್ತರಣೆ
* ಇದು 3 ನೇ ಬಾರಿ ವಿಸ್ತರಣೆ, ಮೇ 17ರವರೆಗೆ ದೆಹಲಿ ಬಂದ್
ನವದೆಹಲಿ(ಮೇ.09): ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ. ಕೊರೋನಾ ನಿಯಂಣತ್ರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಹರಸಾಹಸ ನಡೆಸುತ್ತಿದೆ. ಕಠಿಣ ಕ್ರಮಗಳನ್ನು ಜಾರಿಗೊಳಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೇರೆ ವಿಧಿ ಇಲ್ಲದೇ ಸಿಎಂ ಕೇಜ್ರೀವಾಲ್ ಲಾಕ್‌ಡೌನ್ ಘೋಷಿಸಿದ್ದರು. ಸದ್ಯ ಮೂರನೇ ಬಾರಿ ಲಾಕ್‌ಡೌನ್ ವಿಸ್ತರಿಸಲಾಗಿದ್ದು, ಮೇ. 17ರ ಬೆಳಗ್ಗೆ 5ಗಂಟೆವರೆಗೆ ದೆಹಲಿ ನಿವಾಸಿಗರು ರಸ್ತೆಯಲ್ಲಿ ಓಡಾಡುವಂತಿಲ್ಲ.
ಹೌದು ಈ ಬಾರಿ ಕೊರೋನಾ ಹಾವಳಿಗೆ ರಾಷ್ಟ್ರ ರಾಜಧಾನಿ ಪರಿಸ್ಥಿತಿ ಎಲ್ಲರನ್ನೂ ಭಯಗೊಳಿಸಿತ್ತು. ಏರುತ್ತಿದ್ದ ಪ್ರಕರಣಗಳ ಮಧ್ಯೆ, ಆಕ್ಸಿಜನ್, ಆಸ್ಪತ್ರೆ ಕೊರತೆ ಜನ ಸಾಮಾನ್ಯರನ್ನು ನಡುಗಿಸಿತ್ತು. ಇವೆಲ್ಲಕ್ಕೂ ಕೊಂಚ ಬ್ರೇಕ್ ಹಾಕುವ ಸಲುವಾಗಿ ಎರಡನೇ ಅಲೆ ದಾಳಿ ಇಟ್ಟ ಬಳಿಕ ಸಿಎಂ ಕೇಜ್ರೀವಾಲ್ ದೆಹಲಿಯಲ್ಲಿ ಏಪ್ರಿಲ್ 19ರಂದು ಮೊದಲ ಬಾರಿ ಒಂದು ವಾರದ ಲಾಕ್‌ಡೌನ್ ಘೋಷಿಸಿದ್ದರು. ಇದಾದ ಬಳಿಕ ವಿಸ್ತರಿಸುತ್ತಾ ಬಂದಿದ್ದಾರೆ. ಇನ್ನು ಲಾಕ್‌ಡೌನ್ ಘೋಷಣೆ ಬಳಿಕ, ಕಳೆದ ಮೂರ್ನಾಲ್ಕು ದಿನಗಳಲ್ಲಿ ಪಾಸಿಟಿವಿಟಟಿ ದರ ಶೇ 35 ರಿಂದ ಶೇ. 23ಕ್ಕಿಳಿದಿದೆ.
* ಇನ್ನು ಈವರೆಗೆ ಕೆಲ ನಿಯಮಗಳೊಂದಿಗೆ ಓಡಾಡುತ್ತಿದ್ದ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
* ಸಾರ್ವಜನಿಕ ಸ್ಥಳಗಳಲ್ಲಿ ಮದುವೆ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.
* ಜನರು ಮನೆ ಅಥವಾ ಕೋರ್ಟ್‌ನಲ್ಲಷ್ಟೇ ಮದುವೆಯಾಗಬಹುದು. ಆದರೆ ಈ ಮದುವೆ ಕಾರ್ಯಕ್ಕೆ ಇಪ್ಪತ್ತಕ್ಕೂ ಅಧಿಕ ಮಂದಿ ಸೇರುವಂತಿಲ್ಲ.
* ಡಿಜೆ, ಟೆಂಟ್, ಕ್ಯಾಟರಿಂಗ್ ಎಲ್ಲವೂ ಬಂದ್. ಈ ಮೊದಲೇ ಹಣ ಪಾವತಿಯಾಗಿದ್ದರೆ, ಒಂದೋ ಹಿಂತಿರುಗಿಸಬೇಕು. ಇಲ್ಲವೇ ಒಪ್ಪಂದದ ಮೇರೆಗೆ ಕಾರ್ಯಕ್ರಮದ ದಿನಾಂಕ ಬದಲಾಯಿಸಿ ಸರಿ ಹೊಂದಿಸಬಹುದು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ನರ್ತನದಿಂದ ಒಟ್ಟು 13,10,231 ಮಂದಿಗೆ ಸೋಂಕು ತಗುಲಿದ್ದು, ಸದ್ಯ 87,907 ಸಕ್ರಿಯ ಪ್ರಕರಣಗಳಿವೆ. 19,071 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona