ಜಾರಿ ನಿರ್ದೇಶನಾಲಯದ 5ನೇ ಸಮನ್ಸ್‌ಗೂ ಕ್ಯಾರೇ ಅನ್ನದ ಕೇಜ್ರಿವಾಲ್
ದೆಹಲಿಯ ಹಿಂದಿನ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೀಡಿದ್ದ ಸತತ 5ನೇ ಸಮನ್ಸ್‌ಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೈರಾಗಿದ್ದಾರೆ.
ನವದೆಹಲಿ (ಫೆ.3): ದೆಹಲಿಯ ಹಿಂದಿನ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸತತ 5ನೇ ಸಮನ್ಸ್‌ಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೈರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.2ರ ಶುಕ್ರವಾರದಂದು ವಿಚಾರಣೆಗೆ ಹಾಜರಾಗಲು ಇ.ಡಿ ಕೇಜ್ರಿವಾಲ್‌ಗೆ ನೋಟಿಸ್ ನೀಡಿತ್ತು. ಕಳೆದ 4 ತಿಂಗಳಲ್ಲಿ, ನವೆಂಬರ್ 2, ಡಿಸೆಂಬರ್ 21, ಜನವರಿ 3 ಮತ್ತು ಜನವರಿ 18ಕ್ಕೆ ಕೇಜ್ರಿವಾಲ್ ಇ.ಡಿ ವಿಚಾರಣೆಗೆ ಗೈರಾಗಿದ್ದಾರೆ.
ಜ್ಞಾನವಾಪಿಯಲ್ಲಿ ಪೂಜೆ ಖಂಡಿಸಿ ಮುಸ್ಲಿಮರಿಂದ ವಾರಾಣಸಿ ಬಂದ್
ಇನ್ನು ‘ಸಿಎಂ ಕೇಜ್ರಿವಾಲ್ ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಂಧಿಸಲು ಇ.ಡಿ ಹೊಂಚು ಹಾಕಿದೆ ಹಾಗೂ ಇದಕ್ಕೆ ಬಿಜೆಪಿಯ ಕುಮ್ಮಕ್ಕಿದೆ. ಕೇಜ್ರಿವಾಲ್, ವಿಚಾರಣೆಗೆ ಹಾಜರಾಗುವುದಿಲ್ಲ’ ಎಂದು ಆಪ್ ನಾಯಕರು ಮತ್ತೆ ಕಿಡಿ ಕಾರಿದ್ದಾರೆ.
ಈಗಾಗಲೇ ಇ.ಡಿ. ನೀಡಿದ್ದ ನಾಲ್ಕೂ ಸಮನ್ಸ್‌ಗಳಿಗೆ ಚಕ್ಕರ್ ಹಾಕಿದ್ದ ಕೇಜ್ರಿವಾಲ್ 5ನೇ ಸಲವಾದರೂ ಹಾಜರಾಗುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಇದಕ್ಕೂ ಹಾಜರಾಗಿಲ್ಲ. ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ‘ನಾನು ಹಾಜರಾಗುವ ಬಗ್ಗೆ ನಮ್ಮ ಕಾನೂನು ತಂಡ ತೀರ್ಮಾನ ಕೈಗೊಳ್ಳಲಿದೆ’ ಎಂದಿದ್ದರು. ಇ.ಡಿ ನಾಲ್ಕನೇ ನೋಟಿಸ್ ಸಮಯದಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದರು.
ಭಾರತ್ ಬ್ರಾಂಡ್‌ನಡಿ ಕೇಂದ್ರದಿಂದ ಸಿಗಲಿದೆ 29 ರು.ಗೆ 1 ಕೆ.ಜಿ. ಅಕ್ಕಿ
200 ಬಿಜೆಪಿ, ಆಪ್ ಕಾರ್ಯಕರ್ತರು ಸೆರೆ:
ಇನ್ನು ಆರೋಪ ಪ್ರತ್ಯಾರೋಪಗಳ ಮೂಲಕ ಅಪ್ ಮತ್ತು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪರಸ್ಪರರ ವಿರುದ್ಧ ಪ್ರತಿಭಟಿಸಿಕೊಂಡಿದ್ದಾರೆ. ಈ ವೇಳೆ 150 ಆಪ್ ಹಾಗೂ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರವು ಭಾರೀ ಭ್ರಷ್ಟಾಚಾರ ಎಸಗುತ್ತಿದೆ ಎಂದು ಬಿಜೆಪಿ ಹಾಗೂ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ನಮ್ಮನ್ನು ಸೋಲಿಸಿ ಅಕ್ರಮ ಮಾರ್ಗದಿಂದ ಗೆದ್ದಿದೆ ಎಂದು ಆಪ್ ಕಾರ್ಯಕರ್ತರು ಶುಕ್ರವಾರ ದೆಹಲಿಯಲ್ಲಿ ಪ್ರತಿಭಟಿಸಿದ್ದಾರೆ.