ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 47 ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಳ್ಳುವ ಮೂಲಕ ಅಧಿಕಾರ ಹಿಡಿಯುವ ಸನಿಹದಲ್ಲಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಆಡಳಿತ ನಡೆಸಲು ಸಜ್ಜಾಗಿದೆ. ವಿಶೇಷ ಅಂದರೆ 27 ವರ್ಷದ ಹಿಂದೆ ಈರುಳ್ಳಿಗೆ ಹೋದ ಅಧಿಕಾರವನ್ನು ಬಿಜೆಪಿ ತೆರಿಗೆಯಿಂದ ವಾಪಸ್ ಪಡೆದುಕೊಂಡಿದೆ.

ನವದೆಹಲಿ(ಫೆ.08) ದೆಹಲಿ ವಿಧಾನಸಭಾ ಚುನಾವಣೆ ಮತಏಣಿಕೆ ಪ್ರಕ್ರಿಯೆ ಮುಂದವರಿದಿದೆ. ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಆಮ್ ಆದ್ಮಿ ಪಾರ್ಟಿ 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆದರೆ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿಲ್ಲ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಆಪ್ ಘಟಾನುಘಟಿಗಳು ಮುಗ್ಗರಿಸಿದ್ದಾರೆ. ದೆಹಲಿ ಜನ 27 ವರ್ಷಗಳ ಬಳಿಕ ಬಿಜೆಪಿಗೆ ಮತ್ತೆ ಅಧಿಕಾರ ನೀಡಿದ್ದಾರೆ. ಕಳೆದ 2 ಅವಧಿ ಆಡಳಿತ ನಡೆಸಿದ ಆಮ್ ಆದ್ಮಿ ಪಾರ್ಟಿಯನ್ನು ತಿರಸ್ಕರಿಸಿದ್ದಾರೆ. ವಿಶೇಷ ಅಂದರೆ ದೆಹಲಿ ಗೆದ್ದುಗೆಯನ್ನು ಬಿಜೆಪಿ ಈರುಳ್ಳಿ ಕಾರಣದಿಂದ ಕಳೆದುಕೊಂಡಿತ್ತು. ಇದೀಗ ತೆರಿಗೆ ಮೂಲಕ ದೆಹಲಿ ಗದ್ದುಗೆಯನ್ನು ಬಿಜೆಪಿ ಪಡೆದುಕೊಂಡಿದೆ. ಏನಿದು ಈರುಳ್ಳಿಗೆ ಹೋದ ಮಾನ, ತೆರಿಗೆಯಲ್ಲಿ ವಾಪಸ್ ಪಡೆದ ಬಿಜೆಪಿ ಹಿಂದಿನ ಕತೆ?

ಈರುಳ್ಳಿಯಿಂದ ಹೋದ ಅಧಿಕಾರ, ತೆರಿಗೆಯಿಂದ ವಾಪಸ್
ಅದು 1998. ಅಂದು ಸುಷ್ಮಾ ಸ್ಮರಾಜ್ ಕೇಂದ್ರ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಕ್ಟೋಬರ್ 12, 1998ರಲ್ಲಿ ಸುಷ್ಮಾ ಸ್ವರಾಜ್ ದೆಹಲಿ ಮುಖ್ಯಮಂತ್ರಿಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದರು. ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಸುಷ್ಮಾ ಸ್ವರಾಜ್ ಪಾತ್ರರಾಗಿದ್ದರು. ಇದಾದ ಬಳಿಕ ಕಾಂಗ್ರೆಸ್‌ನಿಂದ ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ದೆಹಲಿ ಮೊದಲ ಮಹಿಳಾ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಬಿಜೆಪಿ ಹಾಗೂ ದೆಹಲಿ ರಾಜಕೀಯ ತೀವ್ರ ಸಂಕಷ್ಟದ ಸಮಯದಲ್ಲಿ ಅಧಿಕಾರಕ್ಕೇರಿದ್ದರು.

ಕೇಜ್ರಿವಾಲ್‌ ಮಣಿಸಿದ ಬೆನ್ನಲ್ಲೇ ಅಮಿತ್‌ ಶಾ ಭೇಟಿಯಾಗಲು ಓಡಿದ ಪರ್ವೇಶ ...

ಆದರೆ ಸುಷ್ಮಾ ಸ್ವರಾಜ್ ದೆಹಲಿ ಮುಖ್ಯಮಂತ್ರಿಯಾಗಿ ಕೇವಲ 52 ದಿನ ಮಾತ್ರ ಆಡಳಿತ ನಡೆಸಿದ್ದರು. ಅತ್ಯಲ್ಪ ಕಾಲದಲ್ಲಿ ಸುಷ್ಮಾ ಸ್ವರಾಜ್ ದಿಢೀರ್ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು. 1998ರ ದೆಹಲಿ ವಿಧಾನಸಭೆ ಚುನಾವಣೆಗೂ ಮೊದಲೇ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೆ ಮುಖ್ಯ ಕಾರಣ 1998ರ ವೇಳೆ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಬಿಜೆಪಿ ಪಕ್ಷದೊಳಗೂ ಆತಂರಿಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿತ್ತು. ಇದರ ಪರಿಣಾಮ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಿದ್ದದರು. ಪ್ರಮುಖವಾಗಿ ಈರುಳ್ಳಿ ಕಾರಣದಿಂದ 1998ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. 

ಬಳಿಕ ಅದೇನೇ ಕಸರತ್ತು ಮಾಡಿದರೂ ಬಿಜೆಪಿಗೆ ಅಧಿಕಾರ ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಶೀಲಾ ದೀಕ್ಷಿತ್ ಬರೋಬ್ಬರಿ 15 ವರ್ಷಗಳ ಕಾಲ ಅಂದರೆ 3 ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ದೆಹಲಿ ಕಾಂಗ್ರೆಸ್ ಭದ್ರಕೋಟೆಯಾಗಿ ಮಾರ್ಪಾಡು ಮಾಡಿತ್ತು. ಅರವಿಂದ್ ಕೇಜ್ರಿವಾಲ್ ಕಳದ 10 ವರ್ಷ ದೆಹಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇದರ ನಡುವೆ ಬಿಜೆಪಿ ಪ್ರಯತ್ನಗಳು ಫಲಿಸಲಿಲ್ಲ. ಆದರೆ ಈ ಬಾರಿಯ ಚುನಾವಣೆ ವೇಳೆ ಆಮ್ ಆದ್ಮಿ ಪಾರ್ಟಿ ಮಾಡಿದ ಸ್ವಯಂಕೃತ ಅಪರಾಧಗಳು ಬಿಜೆಪಿಗೆ ವರವಾಯಿತು. ಇದರ ಜೊತೆಗೆ ಇತ್ತೀಚೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ 12 ಲಕ್ಷ ರೂಪಾಯಿ ವರೆಗಿನ ತೆರಿಗೆ ವಿನಾಯಿತಿ ದೆಹಲಿ ಮತದಾರರ ಮೇಲೆ ಪರಿಣಾಮ ಬೀರಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಮೋದಿ ಸರ್ಕಾರ ಕಾಳಜಿ ವಹಿಸುತ್ತಿದೆ. ತೆರಿಗೆ ವಿನಾಯಿತಿಯಿಂದ ಮಧ್ಯಮ ವರ್ಗ, ಬಡ ವರ್ಗ ಕುಟುಂಬಗಳು ದೆಹಲಿಯಲ್ಲೂ ಬಿಜೆಪಿ ಅಧಿಕಾರ ನೀಡಲು ಬಯಸಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. 1998ರಲ್ಲಿ ಈರುಳ್ಳಿಯಲ್ಲಿ ಹೋದ ಅಧಿಕಾರವನ್ನು ಇದೀಗ ಬಿಜೆಪಿ ಆದಾಯ ತೆರಿಗೆ ವಿನಾಯಿತಿ ಮೂಲಕ ವಾಪಸ್ ಪಡೆದುಕೊಂಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೇರಲು ಹಲವು ಕಾರಣಗಳಿವೆ. ಇದರಲ್ಲಿ ಒಂದು ಕಾರಣ ತೆರಿಗೆ. ಪ್ರಮುಖವಾಗಿ ಆಮ್ ಆದ್ಮಿ ಪಾರ್ಟಿ ಮೇಲಿನ ಹಗರಣ ಆರೋಪ, ನಾಯಕರ ಬಂಧನ, ವ್ಯತಿರಿಕ್ತ ಹೇಳಿಕೆಗಳು, ರಾಜಕೀಯ ಕಾರಣಕ್ಕಾಗಿ ಅಸಂಬದ್ಧ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಘಟನಗಳೇ ನಡೆದಿದೆ. ಹಿಂದೂ ಶ್ರದ್ಧಾ ವಿಚಾರ ಬಂದಾಗ ಯಮುನಾ ನದಿ ಶುಚಿಗೊಳಿಸುವ ಅರವಿಂದ್ ಕೇಜ್ರಿವಾಲ್ ಆಶ್ವಾಸನೆ ಹಾಗೇ ಉಳಿದುಕೊಂಡಿದೆ. ಇವೆಲ್ಲವೂ ಬಿಜೆಪಿಗೆ ವರವಾಗಿದೆ.

Delhi Election Results Highlights | ಬಿಜೆಪಿ ಗೆಲುವಿನ ಸೂತ್ರಗಳು? ...