ನವದೆಹಲಿ[ಫೆ.12]: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಪ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹಿಂದೆ ಸಿಎಂ ಕೇಜ್ರೀವಾಲ್ ಹಾಗೂ ಪಕ್ಷದ ಅನೇಕ ನಾಯಕರ ಪಾತ್ರವಿದೆ. ಆದರೆ ಈ ನಾಯಕರಿಗೆ ಮತ್ತಷ್ಟು ಬಲ ತುಂಬಿದ್ದು, 6 ಮಂದಿಯ ಗುಪ್ತ ತಂಡ. ಡಿಜಿಟಲ್ ಹಾಗೂ ಸೋಶಿಯಲ್ ಮೀಡಿಯಾದಿಂದ ಪಕ್ಷದ ಕಾರ್ಯಕರ್ತರಿಗೆ ಈ ತಂಡದ ಸದಸ್ಯರೇ ತರಬೇತಿ ನೀಡಿದ್ದು. ಹಾಗಾದ್ರೆ ಆ ಸೀಕ್ರೆಟ್ ತಂಡದಲ್ಲಿ ಯಾರ್ಯಾರು ಇದ್ದಾರೆ? ಇಲ್ಲಿದೆ ವಿವರ

ಪೃಥ್ವಿ ರೆಡ್ಡಿ

ಬೆಂಗಳೂರಿನ ಉದ್ಯಮಿ ಪೃಥ್ವಿ ರೆಡ್ಡಿ ಇಂಡಿಯಾ ಅಗೇಂಸ್ಟ್ ಕರಪ್ಶನ್[ಭ್ರಷ್ಟಾಚಾರದ ವಿರುದ್ಧ ಭಾರತದ ಆಂದೋಲನ] ಆಂದೋಲನದ ವೇಳೆ ಕೋರ್ ಕಮಿಟಿ ಭಾಗವಾಗಿದ್ದರು. ಪಕ್ಷದ ಸಂಸ್ಥಾಪಕ ಸದಸ್ಯ ಪೃಥ್ವಿ ಪಕ್ಷಕ್ಕಾಗಿ ಕ್ರೌಡ್ ಫಂಡಿಂಗ್ ಮೇಲೆ ಸಂಪೂರ್ಣ ನಿಗಾ ಇಟ್ಟಿದ್ದಾರೆ. ಬೆಂಬಲಿಗರ ತಂಡವನ್ನೂ ರೆಡ್ಡಿ ಲೀಡ್ ಮಾಡುತ್ತಾರೆ. ಚುನಾವಣೆ ವೇಳೆ ಕ್ಯಾಂಪೇನ್ ಒಂದನ್ನು ಮಾಡಿದ್ದ ರೆಡ್ಡಿ ತನ್ನ ಬೆಂಬಲಿಗರ ಸಹಾಯದಿಂದ ಬೀದಿ ನಾಟಕ, ಫ್ಲ್ಯಾಶ್ ಮಾಬ್, ಮ್ಯೂಸಿಕಲ್ ವಾಕ್ ಜೊತೆ ಜನರು ಪಕ್ಷದೊಂದಿಗೆ ಬೆರೆಯುವಂತೆ ಮಾಡಿದ್ದರು.

ಪ್ರೀತಿ ಶರ್ಮಾ ಮೆನನ್

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯೆ ಹಾಗೂ ರಾಷ್ಟ್ರೀಯ ವಕ್ತಾರೆ ಮುಂಬೈನ ಪ್ರೀತಿ ಮೆನನ್ ಪಕ್ಷದ ಹಲವಾರು ಜವಾಬ್ದಾರಿ ನಿಭಾಯಿಸಿದ್ದಾರೆ. ಸೋಶಿಯಲ್ ಮೀಡಿಯಾ ನಿರ್ವಹಣೆ, ದೇಣಿಗೆ ಸಂಗ್ರಹ ಹಾಗೂ ವಿದೇಶದಲ್ಲಿ ಪಕ್ಷ ಸಂಘಟನೆ ಹೀಗೆ ಹಲವಾರು ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇಂಡಿಯಾ ಅಗೇಂಸ್ಟ್ ಕರಪ್ಶನ್ ಮೂಲಕ ಅವರು ಪಕ್ಷದ ಪರ ಕೆಲಸ ಮಾಡಲಾರಂಭಿಸಿದರು. ಅಲ್ಲದೇ ಹಲವಾರು ಹಿರಿಯ ನಾಯಕ ಮತ್ತು ಗುತ್ತಿಗೆದಾರರ ಭ್ರಷ್ಟಾಚಾರ ಬಯಲು ಮಾಡಿದ್ದಾರೆ.

ಕಪಿಲ್ ಭಾರದ್ವಾಜ್

ಆಮ್ ಆದ್ಮಿ ಪಕ್ಷದೊಂದಿಗೆ ಕಪಿಲ್ ಭಾರದ್ವಾಜ್ ಸಂಬಂಧ ದೀರ್ಘ ಕಾಲದ್ದು. ಪಕ್ಷದ ಾಪರೇಷನ್, ಮಾಧ್ಯಮ, ಪಿಆರ್ ಹಾಗೂ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚುನಾವಣೆ ನಿರ್ವಹಣೆಯಿಂದ ಹಿಡಿದು ದೆಹಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ಪಕ್ಷ ಮತ್ತಷ್ಟು ಬಲಪಡಿಸಲು ಕೆಲಸ ಮಾಡಿದ್ದಾರೆ. ಅಮೆರಿಕಾದಲ್ಲಿ ಶಿಕ್ಷಣ ಪಡೆದಿರುವ ಈ ಪದವೀಧರ ಬೂತ್ ನಿರ್ವಹಣೆ, ಸ್ಟಾರ್ ಪ್ರಚಾರಕರ ಶೆಡ್ಯೂಲ್ ಮಾಡುವುದರೊಂದಿಗೆ, ಪ್ರತಿಪಕ್ಷಗಳ ಪ್ರತಿಯೊಂದು ನಡೆಯ ಮೇಲೆ ನಿಗಾ ವಹಿಸುತ್ತಾರೆ.

ಜಸ್ಮೀನ್ ಶಾ

ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಸಂಬಂಧಿಸಿದ ವಿಚಾರಗಳೊಂದಿಗೆ, ಜಸ್ಮೀನ್ ಪ್ರಣಾಳಿಕೆ ಸಿದ್ಧಪಡಿಸುವ ಕಮಿಟಿ ಸದಸ್ಯರೂ ಕೂಡಾ ಹೌದು. ಅವರು ಆಪ್ ಸರ್ಕಾರದ ಡೈಲಾಗ್ ಆ್ಯಂಡ್ ಡೆಲಿವರಿ ಕಮಿಷನ್ ನ ಉಪಾಧ್ಯಕ್ಷರೂ ಆಗಿದ್ದಾರೆ. ಸರ್ಕಾರದ ಹಲವಾರು ಯೋಜನೆಗಳನ್ನು ಅವರು ರೂಪಿಸಿದ್ದಾರೆ. IIT ಮದ್ರಾಸ್ ನಿಂದ ಬಿ. ಟೆಕ್, ಎಂ. ಟೆಕ್ ಪದವಿ ಪಡೆದಿರುವ ಜಸ್ಮೀನ್ ಬಳಿಕ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲೂ ಪದವಿ ಪಡೆದಿದ್ದಾರೆ. ಬಳಿಕ 12 ವರ್ಷದ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅವರು 2016ರಲ್ಲಿ ಆಪ್ ಜೊತೆ ಕೈ ಜೋಡಿಸಿದರು.

ಹಿತೇಶ್ ಪರ್ದೇಶೀ

ಡಿಜಿಟಲ್ ಕಂಟೆಂಟ್ ಇಂಡಸ್ಟ್ರಿಯ ಹಿತೇಶ್ ಸಮಾಜದ ಅಭಿವೃದ್ಧಿಗಾಗಿ ಏನಾದರೂ ಮಾಡಬೇಕೆಂಬ ನಿಟ್ಟಿನಲ್ಲಿ ಆಪ್ ಪಕ್ಷದ ಪರ ಡಿಜಿಟಲ್ ಪ್ರಚಾರ ಆರಂಭಿಸಿದರು. ಹಿತೇಶ್ ರವರ ಕಂಟೆಂಟ್ ಪಾರ್ಟಿಯ ಪ್ರಚಾರ ಕಾರ್ಯವನ್ನು ಇನ್ನಷ್ಟು ಮಜಾದಾಯಕವಾಗಿಸಿತು. ಅವರ ಕ್ಯಾಂಪೇನ್ ಹಲವರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಚುನಾವಣೆ ಸಂಬಂಧ ಪ್ಲಾನ್ ನೀಡುವುದರೊಂದಿಗೆ ಕಂಟೆಂಟ್ ಬರೆಯುವುದು ಹಾಗೂ ಎಡಿಟಿಂಗ್ ಮಾಡುವುದನ್ನೂ ಆರಂಭಿಸಿದರು. ಹಿತೇಶ್ ಮೊದಲು AIBನಲ್ಲಿ ಮೀಮ್ಸ್ ಮಾಡುವುದರೊಂದಿಗೆ ಫಿಲ್ಟರ್ ಕಾಫಿಯಲ್ಲಿ ಮಾಧ್ಯಮ ತಂಡದ ಚೀಫ್ ಆಗಿದ್ದರು. 

ಆಶ್ವತೀ ಮುರಳೀಧರನ್ 

2009ರಿಂದ ಅರವಿಂದ್ ಕೇಜ್ರೀವಾಲ್ ರವರ RTI ಆಂದೋಲನದಲ್ಲಿ ವಿಶೇಷ ಸದಸ್ಯರಾಗಿರುವ ಅಶ್ವತೀ ಇಂಡಿಯಾ ಅಗೇಂಸ್ಟ್ ಕರಪ್ಶನ್ ಆಂದೋಲನದ ಆರಂಭಿಕ ಸದಸ್ಯೆ ಕೂಡಾ ಹೌದು. ಚುನಾವಣಾ ಸಂದರ್ಭದಲ್ಲಿ ಸಿಎಂ ಕೇಜ್ರೀವಾಲ್ ರವರ ಟೌನ್ ಹಾಲ್ ಕಾರ್ಯಕ್ರಮ ನಿರ್ವಹಣೆ ಸಂಪೂರ್ಣವಾಗಿ ನಿಭಾಯಿಸಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿಯಾಘಿರುವ ಅಶ್ವತೀ ಕಳೆದ ಎರಡು ಚುನಾವಣೆಗಳಂತೆ ಈ ಬಾರಿಯೂ ಬೆಂಬಲಿಗರ ನಿರ್ವಹಣೆಯೊಂದಿಗೆ ಸಮಾವೇಶಗಳ ನಿರ್ವಹಣೆ ನಡೆಸಿದ್ದರು.