ನವದೆಹಲಿ(ಜ.31): ಮಹತ್ವದ ಬೆಳವಣಿಗೆಯೊಂದರಲ್ಲಿ ನಿರ್ಭಯಾ ಹತ್ಯಾಚಾರಿಗಳ ಡೆತ್ ವಾರೆಂಟ್’ಗೆ ದೆಹಲಿ ಕೋರ್ಟ್ ತಡೆ ನೀಡಿದೆ.

"

ನಿರ್ಭಯಾ ಹತ್ಯಾಚಾರಿಗಳ ನಾಲ್ವರು ಆರೋಪಿಗಳಲ್ಲಿ ಓರ್ವನಾದ ವಿನಯ್ ಶರ್ಮಾ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಇತ್ಯರ್ಥವಾಗುವವರೆಗೂ ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ದೆಹಲಿ ಕೋರ್ಟ್ ಆದೇಶಿಸಿದೆ.

ಕೆಲ ಕ್ಷಣಗಳ ಹಿಂದಷ್ಟೇ ಸುಪ್ರೀಂಕೋರ್ಟ್ ಪ್ರಕರಣದ ಮತ್ತೋರ್ವ ಆರೋಪಿ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.

ಈ ಹಿನ್ನಲೆಯಲ್ಲಿ ನಾಲ್ವರೂ ಅಪರಾಧಿಗಳಿಗೂ ನಾಳೆ(ಫೆ.01) ಗಲ್ಲುಶಿಕ್ಷೆ ಜಾರಿಗೊಳಿಸಲು ತಿಹಾರ್ ಜೈಲು ಸಿದ್ಧತೆ ಆರಂಭಿಸಿತ್ತು. ಆದರೆ ದೆಹಲಿ ಕೋರ್ಟ್ ಆದೇಶ ಇದೀಗ ಮತ್ತೆ ಗಲ್ಲುಶಿಕ್ಷೆಯನ್ನು ವಿಳಂಬಗೊಳಿಸಿದೆ.

ಗಲ್ಲು ಮೂವರಿಗೋ, ಎಲ್ಲರಿಗೋ?: ಗಂಟೆಯಲ್ಲಿನ ನಿರ್ಧಾರ!

ಸದ್ಯ ವಿನಯ್ ಶರ್ಮಾ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ರಾಷ್ಟ್ರಪತಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೂ  ಅಪರಾಧಿಗಳಿಗೆ ಮತ್ತೆ 14 ದಿನಗಳ ಕಾಲಾವಕಾಶ ಸಿಗಲಿದೆ.

ವಿನಯ್ ಶರ್ಮಾ ಅರ್ಜಿ ಪರಿಶೀಲನೆ ಹಾಗೂ ಪವನ್ ಗುಪ್ತಾಗಿರುವ ಕಾನೂನು ಅವಕಾಶಗಳ ಹಿನ್ನೆಲೆಯಲ್ಲಿ ಹತ್ಯಾಚಾರಿಗಳ ಗಲ್ಲುಶಿಕ್ಷೆ 4 ರಿಂದ 6 ವಾರಗಳ ಕಾಲ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.

ಇನ್ನು ದೆಹಲಿ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ ಆಶಾದೇವಿ, ಅಪರಾಧಿ ಪರ ವಕೀಲ ಎಪಿ ಸಿಂಗ್ ಅಪರಾಧಿಗಳನ್ನು ಗಲ್ಲಿಗೇರಿಸಲು ಎಂದೂ ಬಿಡುವುದಿಲ್ಲ ಎಂದು ತಮಗೆ ಸವಾಲು ಹಾಕಿದ್ದಾರೆ. ನಾನು ಕಾನೂನು ಹೋರಾಟವನ್ನು ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.