* ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಆದೇಶ'* ಹರ್ಯಾಣ ಮಾಜಿ ಸಿಎಂ ಚೌಟಾಲಾಗೆ 4 ವರ್ಷ ಜೈಲು* 50 ಲಕ್ಷ ದಂಡ, ಆಸ್ತಿ ವಶಕ್ಕೆ ಕೋರ್ಟ್ ಸೂಚನೆ
ನವದೆಹಲಿ(ಮೇ.28): ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌಟಾಲಾ ಅವರಿಗೆ ಅಕ್ರಮ ಆಸ್ತಿಯ ಪ್ರಕರಣದಲ್ಲಿ, ದಿಲ್ಲಿ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಜೈಲು ಶಿಕ್ಷೆಯೊಂದಿಗೆ 50 ಲಕ್ಷ ರು. ದಂಡವನ್ನು ವಿಧಿಸಿದ್ದು, ಚೌಟಾಲಾ ಬಳಿಯಿರುವ 4 ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಅವರು ಶಾಲಾ ಶಿಕ್ಷಕರ ಅಕ್ರಮ ನೇಮಕ ಪ್ರಕರಣದಲ್ಲಿ 10 ವರ್ಷ ಸಜೆ ಅನುಭವಿಸಿ ಹೊರಬಂದಿದ್ದರು. ಅಷ್ಟರಲ್ಲೇ ಮತ್ತೆ ಜೈಲು ಸೇರುವಂತಾಗಿದೆ.
ಚೌಟಾಲಾ ಅಕ್ರಮ ಏನು?:
1993ರಿಂದ 2006ರ ನಡುವೆ ತಮ್ಮ ಅಧಿಕಾರಾವಧಿಯಲ್ಲಿ ಚೌಟಾಲಾ ತಮ್ಮ ಕಾನೂನುಬದ್ಧ ಆದಾಯಕ್ಕೆ ಮೀರಿ ಅಕ್ರಮವಾಗಿ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಸಿಬಿಐ, 2005ರಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿತ್ತು. 2010ರಲ್ಲಿ ಇವರ ವಿರುದ್ಧ ಚಾಜ್‌ರ್‍ಶೀಟ್ ಕೂಡಾ ದಾಖಲಿಸಲಾಗಿತ್ತು. ‘ಇವರ ಒಟ್ಟು ಅಕ್ರಮ ಆಸ್ತಿಯ ಮೌಲ್ಯ 6.09 ಕೋಟಿ ರು.ಗಳಷ್ಟು ಇದೆ. ಇದು ಅವರ ಕಾನೂನುಬದ್ಧ ಆದಾಯಕ್ಕಿಂತ ಶೇ.189.11ರಷ್ಟುಹೆಚ್ಚಾಗಿದೆ’ ಎಂದು ಸಿಬಿಐ ಹೇಳಿತ್ತು.
10 ವರ್ಷ ಜೈಲಿಗೆ ಹೋಗಿದ್ದ ಚೌಟಾಲಾ:
1999-2000 ನೇ ಸಾಲಿನಲ್ಲಿ ಹರ್ಯಾಣದ ಶಾಲಾ ಶಿಕ್ಷಕಿಯರ ನೇಮಕಾತಿ ವೇಳೆ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ 2013ರಲ್ಲಿ ದೆಹಲಿ ಹೈಕೋರ್ಟ್ ಚೌಟಾಲಾ ಹಾಗೂ ಅವರ ಪುತ್ರ ಅಜಯ ಸಿಂಗ್ ಚೌಟಾಲಾ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 10 ವರ್ಷಗಳ ಶಿಕ್ಷೆ ಮುಗಿಸಿ ಕಳೆದ ವರ್ಷವೇ ಚೌಟಾಲಾ ಬಿಡುಗಡೆ ಹೊಂದಿದ್ದರು.
