ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಉಗ್ರನಿಗೆ ಗಲ್ಲು| ದಿಲ್ಲಿ ಸೆಷನ್ಸ್‌ ಕೋರ್ಟ್‌ ಮಹತ್ವದ ಆದೇಶ| ಆರಿಫ್‌ ಖಾನ್‌ಗೆ 11 ಲಕ್ಷ ರು. ದಂಡ

ನವದೆಹಲಿ(ಮಾ.16): 2008ರಲ್ಲಿ ನಡೆದ ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್‌ ಮುಜಾಹಿದ್ದೀನ್‌ ಭಯೋತ್ಪಾದಕ ಆರಿಜ್‌ ಖಾನ್‌ಗೆ ದಿಲ್ಲಿ ಹೆಚ್ಚುವರಿ ಸತ್ರ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ದಿಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮೋಹನಚಂದ್‌ ಶರ್ಮಾ ಹುತಾತ್ಮರಾಗಿದ್ದರು. ಈ ಪ್ರಕರಣವು ‘ಅಪರೂಪದಲ್ಲೇ ಅಪರೂಪ’ ಎಂದು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಂದೀಪ್‌ ಯಾದವ್‌, ‘ಆರಿಫ್‌ನನ್ನು ಸಾಯುವವರೆಗೆ ನೇಣಿಗೇರಿಸಿ’ ಎಂದು ಆದೇಶಿಸಿದರು.

ಇದೇ ವೇಳೆ, ಆರಿಫ್‌ಗೆ 11 ಲಕ್ಷ ರು. ದಂಡ ವಿಧಿಸಿದ ಕೋರ್ಟು, ಇದರಲ್ಲಿ 10 ಲಕ್ಷ ರು.ಗಳನ್ನು ಶರ್ಮಾ ಅವರ ಕುಟುಂಬಕ್ಕೆ ನೀಡಬೇಕು ಎಂದು ಸೂಚಿಸಿತು. ಕಳೆದ ಸೋಮವಾರವಷ್ಟೇ ಆರಿಫ್‌ನನ್ನು ದೋಷಿ ಎಂದು ಕೋರ್ಟ್‌ ಪರಿಗಣಿಸಿತ್ತು.

ಏನಿದು ಪ್ರಕರಣ?:

ದಿಲ್ಲಿಯಲ್ಲಿ 2008ರಲ್ಲಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದ 39 ಜನ ಸಾವನ್ನಪ್ಪಿದ್ದರು. ಕೃತ್ಯ ಎಸಗಿದ ಉಗ್ರರು ಜಾಮಿಯಾ ನಗರದ ಬಾಟ್ಲಾ ಹೌಸ್‌ ಎಂಬಲ್ಲಿ ಅವಿತಿದ್ದರು. ಇವರ ಬಂಧನಕ್ಕೆ ಪೊಲೀಸರು ಎನ್‌ಕೌಂಟರ್‌ ನಡೆಸಿದಾಗ ಉಗ್ರರ ಗುಂಡಿಗೆ ಮೋಹನಚಂದ್‌ ಶರ್ಮಾ ಬಲಿಯಾಗಿದ್ದರು. ಆದರೆ ಆರಿಫ್‌ ಆಗ ಪರಾರಿಯಾಗಿ 2018ರಲ್ಲಿ ಸಿಕ್ಕಿಬಿದ್ದಿದ್ದ.