ನವದೆಹಲಿ (ಡಿ.18): ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಕೃಷಿ ಮಸೂದೆಗಳು ರೈತ ವಿರೋಧಿ ಎಂದು ಹರಿಹಾಯ್ದು, ವಿಧೇಯಕಗಳ ಪ್ರತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ವಿಧಾನಸಭೆಯಲ್ಲೇ ಹರಿದು ಹಾಕಿದ್ದಾರೆ. ಆದರೆ ಇದೇ ಕೇಜ್ರಿವಾಲ್‌ ಅವರು ಮೂರು ವರ್ಷಗಳ ಹಿಂದೆ ಕೃಷಿ ಮಸೂದೆಯಲ್ಲಿರುವ ಅಂಶಗಳನ್ನೇ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ರೂಪದಲ್ಲಿ ನೀಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದು ಕೇಜ್ರಿವಾಲ್‌ ಹಾಗೂ ಆಮ್‌ ಆದ್ಮಿ ಪಕ್ಷಕ್ಕೆ ತೀವ್ರ ಮುಖಭಂಗ ಉಂಟು ಮಾಡಿದೆ. ಕೇಜ್ರಿವಾಲ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಪಂಜಾಬ್‌ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಆಮ್‌ ಆದ್ಮಿ ಪಕ್ಷ 2017ರಲ್ಲಿ ಹಲವು ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಅಧಿಕಾರಕ್ಕೆ ಬಂದರೆ ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಹೂಡಿಕೆಗೆ ಒತ್ತು ನೀಡಲಾಗುವುದು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ರೈತರು ರಾಜ್ಯದ ಹೊರಗೂ ಉತ್ಪನ್ನ ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿತ್ತು.

ಕೇಂದ್ರ ಸರ್ಕಾರ ಅಂಗೀಕರಿಸಿದ ಕೃಷಿ ಮಸೂದೆಯಲ್ಲೂ ಇದೇ ಅಂಶಗಳಿವೆ. ವಿಶೇಷ ಎಂದರೆ, ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದ ಬೆನ್ನಲ್ಲೇ ದೆಹಲಿ ಸರ್ಕಾರ ಕೂಡ ಆ ಮೂರು ಕಾಯಿದೆಗಳಿಗೆ ನವೆಂಬರ್‌ನಲ್ಲೇ ಅನುಮೋದನೆ ನೀಡಿತ್ತು. ಆದರೆ ಇದೀಗ ಆ ಮಸೂದೆಗಳು ರೈತರ ವಿರೋಧಿ ಎಂದು ಕೇಜ್ರಿವಾಲ್‌ ಹೇಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

AAP ಸಂಸದ, ಸಚಿವರಿಗೆ ಮಹತ್ವದ ಸೂಚನೆ ನೀಡಿದ ಕೇಜ್ರಿವಾಲ್; ದೇಶವೇ ಮೆಚ್ಚುಗೆ!

ಅರವಿಂದ ಕೇಜ್ರಿವಾಲ್‌ ಅವರು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಅವರು ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ ಟೀಕಿಸಿದ್ದಾರೆ.

ಕೇಜ್ರಿ ನೀಡಿದ್ದ ಭರವಸೆಗಳು

- ರಾಜ್ಯ ಹಾಗೂ ಹೊರರಾಜ್ಯದ ಇಷ್ಟಬಂದ ಮಾರುಕಟ್ಟೆಯಲ್ಲಿ ಉತ್ಪನ್ನ ಮಾರಲು ರೈತರಿಗೆ ಅನುಕೂಲ ಕಲ್ಪಿಸಲು ಎಪಿಎಂಸಿ ಕಾಯ್ದೆ ತಿದ್ದುಪಡಿ

- ಪ್ರತಿ ಜಿಲ್ಲೆಯ ಕೃಷಿ ಮಾರುಕಟ್ಟೆ, ಸಂಸ್ಕರಣೆ ಕೇಂದ್ರಗಳಲ್ಲಿ ಬೃಹತ್‌ ಪ್ರಮಾಣದ ಖಾಸಗಿ ಹೂಡಿಕೆ ಆಕರ್ಷಣೆ