ದೆಹಲಿಯ ಚಾವರಿ ಬಜಾರ್ ಪ್ರದೇಶದಲ್ಲಿ ನಿರ್ಮಾಣ ಹಂತದ ಮೂರಂತಸ್ತಿನ ಕಟ್ಟಡ ಕುಸಿದುಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿನ ಕಟ್ಟಡ ದುರಂತದ ನೆನಪು ಮಾಸುವ ಮುನ್ನವೇ ಇದೀಗ ಮತ್ತೆ ರಾಷ್ಟ್ರ ರಾಜಧಾನಿ ದೆಹಲಿಯ ಚಾವರಿ ಬಜಾರ್ ಪ್ರದೇಶದಲ್ಲಿ ನಿರ್ಮಾಣ ಹಂತದ ಮೂರಂತಸ್ತಿನ ಕಟ್ಟಡ ಕುಸಿದುಬಿದ್ದು ಇಬ್ಬರು ದುರ್ಮರಣಕ್ಕೀಡಾದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಪೊಲೀಸ್, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡು
ಶೀಶ್ ಮಹಲ್ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿರುವ ಗಾಲಿ ಸತ್ತಾರ ಚಾವರಿ ಬಜಾರ್ನ ಸಮೀಪದ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿತ್ತು. ಇಂದು ಬೆಳಗ್ಗೆ ಹಠಾತ್ ಕುಸಿದುಬಿದ್ದಿದೆ. ಕಟ್ಟಡದೊಳಗೆ ಇನ್ನು ಸುಮಾರು 15ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ದೆಹಲಿ ಪೊಲೀಸರ ಪ್ರಕಾರ ಹೇಳುವ ಪ್ರಕಾರ, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕೆಲವು ಜನರು ಗಾಯಗೊಂಡಿದ್ದಾರೆ ಎಂದು ಡಿಎಫ್ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರು ಅಗ್ನಿಶಾಮಕಗಳಿಂದ ರಕ್ಷಣಾ ಕಾರ್ಯ
ಪ್ರಸ್ತುತ ಒಟ್ಟು ಆರು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಅಪಘಾತದಲ್ಲಿ ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಸೆಪ್ಟೆಂಬರ್ನಲ್ಲಿ ಪಿಜಿ ಕಟ್ಟಡ ಕುಸಿದು ಬಿದ್ದಿತ್ತು
ಇದಕ್ಕೂ ಮುನ್ನ ಕಳೆದ ತಿಂಗಳು ಸೆಪ್ಟೆಂಬರ್ 6 ರಂದು ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು ಪಿಜಿ ಕಟ್ಟಡದಲ್ಲಿದ್ದ ಏಳು ಜನ ಮೃತಪಟ್ಟಿದ್ದರು. ಮೃತಪಟ್ಟವರ ಪೈಕಿ ಹೆಚ್ಚಿನವರು ದೆಹಲಿ ವಿವಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಾಗಿದ್ದರು. ಈ ದುರಂತ ಘಟನೆಯ ಬಳಿಕ ದೆಹಲಿಯಲ್ಲಿ ಕುಸಿದು ಬೀಳುವ ಹಂತದಲ್ಲಿರುವ ಹಳೆಯ, ಕಳಪೆ ಕಟ್ಟಡಗಳನ್ನು ಗುರುತಿಸಲು ಅಭಿಯಾನವನ್ನೇ ಆರಂಭಿಸಲಾಗಿತ್ತು. ಇದರ ಹೊರತಾಗಿಯೂ ಇದೀಗ ಮತ್ತೊಂದು ದುರಂತ ಸಂಭವಿಸಿದೆ.






