ನವದೆಹಲಿ(ನ.30): ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ದಿಲ್ಲಿ ಗಡಿಯಲ್ಲಿನ ರಸ್ತೆಗಳಲ್ಲಿ ಬೀಡು ಬಿಟ್ಟು 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹರಾರ‍ಯಣ ಹಾಗೂ ಪಂಜಾಬ್‌ ರೈತರು, ‘ಷರತ್ತಿನ ಮಾತುಕತೆ’ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ್ದ ಆಹ್ವಾನ ತಿರಸ್ಕರಿಸಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರ ಹಾಗೂ ರೈತರ ನಡುವಿನ ಬಿಕ್ಕಟ್ಟು ಮುಂದುವರಿದಂತಾಗಿದೆ.

ಶನಿವಾರ ಮಾತನಾಡಿದ್ದ ಅಮಿತ್‌ ಶಾ, ‘ದಿಲ್ಲಿ ಗಡಿಯ ಸಿಂಘು ಹಾಗೂ ಟಿಕ್ರಿ ಹೆದ್ದಾರಿಗಳ ಮೇಲೆ ಬೀಡು ಬಿಟ್ಟಿರುವ ರೈತರು, ಸರ್ಕಾರವು ಪ್ರತಿಭಟನೆಗೆ ಅವಕಾಶ ಕಲ್ಪಿಸಿರುವ ಬುರಾರಿ ಮೈದಾನಕ್ಕೆ ಸ್ಥಳಾಂತರಗೊಳ್ಳಬೇಕು. ಬಳಿಕ ಡಿಸೆಂಬರ್‌ 3ರಂದು ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ’ ಎಂದಿದ್ದರು.

ಇದನ್ನು ಭಾನುವಾರ ತಿರಸ್ಕರಿಸಿರುವ ವಿವಿಧ 30 ರೈತ ಸಂಘಟನೆಗಳ ಮುಖಂಡರು, ‘ಸರ್ಕಾರದ ಯಾವುದೇ ಷರತ್ತನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಬೇಷರತ್ತಾಗಿ ಮಾತುಕತೆಗೆ ಕರೆದರೆ ಮಾತ್ರ ಹೋಗುತ್ತೇವೆ’ ಎಂದಿದ್ದಾರೆ. ‘ರೈತ ಕಾಯ್ದೆ ರದ್ದಾಗಬೇಕೆಂಬ ಬೇಡಿಕೆ ಈಡೇರುವ ತನಕ ಪ್ರತಿಭಟನೆ ನಿಲ್ಲಿಸಲ್ಲ. 4 ತಿಂಗಳಿಗಾಗುವಷ್ಟುಪಡಿತರ ತಂದಿದ್ದೇವೆ. ನಾವು ಹೆದ್ದಾರಿ ಬಿಟ್ಟು ಬುರಾರಿ ಮೈದಾನಕ್ಕೆ ಹೋಗುವುದಿಲ್ಲ. ಅದೊಂದು ರೀತಿ ತೆರೆದ ಜೈಲಿನ ಥರ ಇದೆ’ ಎಂದು ರೈತರು ಗುಡುಗಿದ್ದಾರೆ.

ಈ ನಡುವೆ, ಕೆಲವು ರೈತರು ಬುರಾರಿ ಮೈದಾನಕ್ಕೆ ಆಗಮಿಸಿ ಅಲ್ಲಿಯೂ ಪ್ರತಿಭಟನೆ ಆರಂಭಿಸಿದ್ದಾರೆ.

ಆದರೆ, ಕೃಷಿ ಕಾಯ್ದೆಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರು ಅಮಿತ್‌ ಶಾ ಆಹ್ವಾನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ‘ಶಾ ಆಹ್ವಾನವನ್ನು ಒಪ್ಪಿ ರೈತರು ಮಾತುಕತೆಗೆ ಹೋಗಬೇಕು’ ಎಂದಿದ್ದಾರೆ.

ಮೋದಿ ದುರಹಂಕಾರಿ- ಕಾಂಗ್ರೆಸ್‌ ಟೀಕೆ:

ಈ ನಡುವೆ ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ಭಾಷಣದಲ್ಲಿ ರೈತ ಕಾಯ್ದೆಗಳನ್ನು ಸಮರ್ಥಿಸಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಟೀಕಿಸಿದ್ದಾರೆ. ‘ಅಧಿಕಾರದ ಅಮಲಿನಲ್ಲಿ ಸರ್ಕಾರ ತೇಲುತ್ತಿದೆ. ಪ್ರಧಾನಿ ಒಬ್ಬ ದುರಹಂಕಾರಿ. ಕಾಯ್ದೆ ಮರುಪರಿಶೀಲನೆ ಮಾಡುವ ಮುಕ್ತ ನಿಲುವನ್ನೂ ಹೊಂದಿಲ್ಲ’ ಎಂದಿದ್ದಾರೆ.

ರಾಜಕೀಯ ಪ್ರೇರಿತ ಎಂದಿಲ್ಲ: ಶಾ

ಹೈದರಾಬಾದ್‌: ‘ದಿಲ್ಲಿ ಗಡಿಗಳಲ್ಲಿ ರೈತರು ನಡೆಸಿರುವ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದು ಯಾವತ್ತೂ ಕರೆದಿಲ್ಲ. ಮುಂದೆ ಕರೆಯುವುದೂ ಇಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ. ‘ದಿಲ್ಲಿ ಚಲೋ ಪ್ರತಿಭಟನೆಗೆ ವಿಪಕ್ಷಗಳ ಬೆಂಬಲವಿದೆ. ಪ್ರತಿಭಟನೆಗೆ ಹರ್ಯಾಣ ರೈತರು ಕಾರಣರಲ್ಲ. ಹೋರಾಟಕ್ಕೆ ಖಲಿಸ್ತಾನ ಉಗ್ರರ ಲಿಂಕ್‌ ಇದೆ’ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಆರೋಪಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆಯನ್ನು ಶಾ ನೀಡಿದ್ದು, ಖಟ್ಟರ್‌ಗೆ ಮುಖಭಂಗವಾಗಿದೆ.