ಕಾರು ಸ್ಫೋಟದಿಂದ ಹಲವರು ಮೃತರಾಗಿರುವುದು ತೀವ್ರ ಆಘಾತ ತಂದಿದೆ. ಹೆಚ್ಚಿನ ಭದ್ರತೆ ಹಾಗೂ ದಟ್ಟಣೆ ಇರುವ ಸ್ಥಳದಲ್ಲಿ ನಡೆದಿರುವ ಸ್ಫೋಟದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಂಗಳೂರು (ನ.11): ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟದಿಂದ ಹಲವರು ಮೃತರಾಗಿರುವುದು ತೀವ್ರ ಆಘಾತ ತಂದಿದೆ. ಹೆಚ್ಚಿನ ಭದ್ರತೆ ಹಾಗೂ ದಟ್ಟಣೆ ಇರುವ ಸ್ಥಳದಲ್ಲಿ ನಡೆದಿರುವ ಸ್ಫೋಟದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಫೋಟದ ಸುದ್ದಿ ಕೇಳಿ ತೀವ್ರ ದುಃಖ ಮತ್ತು ಆಘಾತ ಉಂಟಾಗಿದೆ. ಆರಂಭಿಕ ಮಾಹಿತಿ ಪ್ರಕಾರ ಹಲವಾರು ಅಮೂಲ್ಯ ಜೀವಗಳು ಬಲಿಯಾಗಿವೆ.

ಈ ಕ್ಷಣದಲ್ಲಿ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಹಾಗೂ ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಹೆಚ್ಚಿನ ಭದ್ರತೆ ಮತ್ತು ಜನದಟ್ಟಣೆ ಇರುವ ಸ್ಥಳದಲ್ಲಿ ಸಂಭವಿಸಿದ ಈ ಸ್ಫೋಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತ್ವರಿತ ಮತ್ತು ಸಮಗ್ರ ತನಿಖೆಗೆ ಒಳಪಡಿಸಬೇಕು. ಜತೆಗೆ ಭದ್ರತಾ ಲೋಪಕ್ಕೆ ಕಾರಣವಾದವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಗರದಾದ್ಯಂತ ಹೈ ಅಲರ್ಟ್: ದೆಹಲಿಯ ಕೆಂಪುಕೋಟೆ ಬಳಿ ಭೀಕರ ಸ್ಫೋಟ ಸಂಭವಿಸಿ ಹಲವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ನಗದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸುವಂತೆ ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸೂಚಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣ ಮತ್ತು ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಟರ್ಮಿನಲ್‌ಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಆಯುಕ್ತರ ಸೂಚನೆಯ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ.

ನಮ್ಮ ಮೆಟ್ರೋ ರೈಲು ನಿಲ್ದಾಣಗಳಿಗೆ ನಿಯಮಿತವಾಗಿ ಭೇಟಿ ನೀಡಿ ಗಸ್ತು ತಿರುಗುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ನಗರದಲ್ಲಿನ ಹೋಟೆಲ್‌ಗಳು, ಪೇಯಿಂಗ್ ಗೆಸ್ಟ್, ವಸತಿಗೃಹ, ಮಾಲ್‌ ಸೇರಿ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ. ಎಲ್ಲಾ ಡಿಸಿಪಿಗಳು ಮತ್ತು ಎಸಿಪಿಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಪೊಲೀಸರು ಗಸ್ತು ತಿರುಗುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ. ಯಾವುದೇ ಸಂಭಾವ್ಯ ಅಪಾಯಗಳು ಎದುರಾದರೂ ಸಹ ಅದನ್ನು ಸಮರ್ಥವಾಗಿ ಎದುರಿಸಲು ವಿಧ್ವಂಸಕ ವಿರೋಧಿ ತಂಡಗಳು ಮತ್ತು ಬಾಂಬ್ ನಿಷ್ಕ್ರಿಯ ದಳಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ಸೀಮಂತ್‌ ಕುಮಾರ್ ತಿಳಿಸಿದ್ದಾರೆ.

ರಾಜ್ಯಾದ್ಯಂತ ಹೈ ಅಲರ್ಟ್ ಗೆ ಸೂಚಿಸಿದ ಡಿಜಿ

ರಾಜ್ಯದ ಸೂಕ್ಷ್ಮ ಪ್ರದೇಶ, ಜನನಿಭಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಸೂಚನೆ ನೀಡಿದ್ದಾರೆ. ಚೀತಾ, ಹೊಯ್ಸಳ, ಬೀಟ್ ಪೊಲೀಸರು ಅಲರ್ಟ್ ಇರುವಂತೆ, ರಾಜ್ಯಾದ್ಯಂತ ಎಲ್ಲಾ ಎಸ್.ಪಿಗಳಿಗೂ ಡಿ.ಜಿ ಸೂಚನೆ ನೀಡಿದ್ದಾರೆ. ಜತೆಗೆ ನಗರ ಪ್ರದೇಶದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ನಿರ್ದೇಶಿಸಿದ್ದಾರೆ.