ನವದೆಹಲಿ(ಸೆ.01): ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಿ ಸೇನಾಪಡೆಗಳಿಗೆ ಮತ್ತಷ್ಟುಶಕ್ತಿ ತುಂಬುವ ಉದ್ದೇಶದಿಂದ ರಕ್ಷಣಾ ಸಚಿವಾಲಯ ಪಿನಾಕಾ ರಾಕೆಟ್‌ ಲಾಂಚರ್‌ಗಳನ್ನು ಖರೀದಿಸಲು ಮುಂದಾಗಿದೆ. ಈ ಸಂಬಂಧ ದೇಶದ ಎರಡು ರಕ್ಷಣಾ ಕಂಪನಿಗಳ ಜತೆ 2850 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಟಾಟಾ ಪವರ್‌ ಕಂಪನಿ ಹಾಗೂ ಎಲ್‌ ಅಂಡ್‌ ಟಿ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಲಾಂಚರ್‌ಗಳಿಗೆ ಬಿಇಎಂಎಲ್‌ ವಾಹನಗಳನ್ನು ಸರಬರಾಜು ಮಾಡಲಿದೆ.

ಪ್ರಮುಖ ಆರು ಸೇನಾ ರೆಜಿಮೆಂಟ್‌ಗಳಿಗೆ ಪಿನಾಕಾ ರಾಕೆಟ್‌ ಲಾಂಚರ್‌ಗಳನ್ನು ಖರೀದಿಸಲು ಎರಡು ಪ್ರಮುಖ ದೇಶೀಯ ಶಸ್ತ್ರಾಸ್ತ್ರ ಉತ್ಪಾದನಾ ಕಂಪನಿಗಳೊಂದಿಗೆ ರಕ್ಷಣಾ ಸಚಿವಾಲಯ 2,580 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ. ದೇಶೀಯ ಕಂಪನಿಗಳಾದ ಟಾಟಾ ಪವರ್‌ ಲಿ. ಮತ್ತು ಇಂಜಿನಿಯರಿಂಗ್‌ ಮೇಜರ್‌ ಲಾರ್ಸೆನ್‌ ಆ್ಯಂಡ್‌ ಟರ್ಬೋ ಕಂಪನಿಗಳೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಇಎಂಎಲ್‌ ಸಹ ಈ ಒಪ್ಪಂದದಲ್ಲಿ ಭಾಗಿಯಾಗಿದ್ದು, ರಾಕೆಟ್‌ ಲಾಂಚರ್‌ಗಳಿಗೆ ಅಳವಡಿಸುವ ವಾಹನಗಳನ್ನು ಪೂರೈಸಲಿದೆ. 2024ರ ವೇಳೆಗೆ ರಾಕೆಟ್‌ ಲಾಂಚರ್‌ ಕಾರಾರ‍ಯರಂಭ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಸಶಸ್ತ್ರ ಪಡೆಯ ಸನ್ನದ್ಧತೆಯನ್ನು ಇನ್ನಷ್ಟುಹೆಚ್ಚಿಸುವ ಸಲುವಾಗಿ ಪಿನಾಕಿ ರೆಜಿಮೆಂಟ್‌ಗಳನ್ನು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.