ನವದೆಹಲಿ(ಫೆ.14): ಜ.26ರಂದು ರೈತರ ಟ್ರ್ಯಾಕ್ಟರ್‌ ಪರೇಡ್‌ ವೇಳೆ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿತರಾಗಿರುವ ನಟ ದೀಪ್‌ ಸಿಧು, ಇಕ್ಬಾಲ್‌ ಸಿಂಗ್‌ನನ್ನು ಶನಿವಾರ ದೆಹಲಿ ಪೊಲೀಸರು ಘಟನಾ ಸ್ಥಳ ಕೆಂಪುಕೋಟೆಗೆ ಕೊರೆದೊಯ್ದು, ತನಿಖೆಯ ಭಾಗವಾಗಿ ಘಟನೆಯನ್ನು ಮರುಸೃಷ್ಟಿಸಿ ವಿಚಾರಣೆ ನಡೆಸಿದರು.

ಜ.26ರಂದು ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿ ಹಾನಿ ಮಾಡಿದ್ದ ಮತ್ತು ಸಿಖ್‌ ಧ್ವಜವನ್ನು ಹಾರಿಸಿದ್ದ ಆರೋಪದ ಮೇಲೆ ಫೆ.8ರಂದು ಆರೋಪಿ ದೀಪ್‌ ಸಿಧು ಮತ್ತು ಫೆ.9ರಂದು ಇಕ್ಬಾಲ್‌ನನ್ನು ಬಂಧಿಸಲಾಗಿತ್ತು. ಗಲಭೆ ಸಂಬಂಧ ಈವರೆಗೆ ಮೂವರನ್ನೂ ಮಾತ್ರ ಪೊಲೀಸರು ಬಂಧಿಸಿದ್ದು, ಉಳಿದವರ ಸೆರೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್‌ನೊಂದಿಗೆ ನುಗ್ಗಿದ ಪ್ರತಿಭಟನಾಕಾರರು ಕೆಂಪುಕೋಟೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಘಟನೆಯಲ್ಲಿ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿ, 500 ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದರು.