ತಿರುವನಂತಪುರ(ಮೇ.19): ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸತತ 2ನೇ ಬಾರಿಗೆ ಪುನರಾಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದ ಎಡರಂಗ, ಇದೀಗ ದೇಶದ ರಾಜಕೀಯ ರಂಗಕ್ಕೇ ಅಚ್ಚರಿ ನೀಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಹೊರತುಪಡಿಸಿ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದವರನ್ನೆಲ್ಲಾ ನೂತನ ಸಚಿವ ಸಂಪುಟ ರಚನೆ ವೇಳೆ ಕೈಬಿಟ್ಟಿದೆ.

ಈ ಪ್ರಕ್ರಿಯೆ ವೇಳೆ, ಪಿಣರಾಯಿ ಅವರ ಅಳಿಯ ಪಿ.ಎ. ಮೊಹಮದ್‌ ರಿಯಾಸ್‌ ಅವರಿಗೆ ಮಂತ್ರಿ ಪಟ್ಟಸಿಕ್ಕಿದ್ದರೆ, ನಿಫಾ ಹಾಗೂ ಕೊರೋನಾ ವೈರಸ್‌ ತಂದೊಡ್ಡಿದ್ದ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಿಸಿ ವಿಶ್ವಮನ್ನಣೆಗೆ ಪಾತ್ರರಾಗಿದ್ದ ಆರೋಗ್ಯ ಮಂತ್ರಿ ಕೆ.ಕೆ. ಶೈಲಜಾ ಅವರು ಸಂಪುಟದಿಂದ ಹೊರಗುಳಿಯುವಂತಾಗಿದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಎಡರಂಗ ಸರ್ಕಾರಕ್ಕೆ ಉತ್ತಮ ಹೆಸರು ತಂದುಕೊಟ್ಟಿದ್ದ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ 60 ಸಾವಿರ ಮತಗಳಿಂದ ವಿಜೇತರಾಗಿದ್ದ ಶೈಲಜಾ ಅವರನ್ನು ಹೊರಗಿಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂಪೂರ್ಣ ಹೊಸ ತಂಡ:

ಸತತ 2 ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಈ ಬಾರಿ ಕೇರಳ ಎಡರಂಗ ಟಿಕೆಟ್‌ ನಿರಾಕರಿಸಿತ್ತು. ಇದರಿಂದ ಎಡರಂಗಕ್ಕೆ ಭಾರಿ ಹೊಡೆತ ಬೀಳಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ನಿರೀಕ್ಷೆಗೂ ಮೀರಿ 140 ಸ್ಥಾನಗಳ ಪೈಕಿ 99ರಲ್ಲಿ ಎಡರಂಗ ಜಯಭೇರಿ ಬಾರಿಸಿತ್ತು. ಆ ಫಲಿತಾಂಶದಿಂದ ಉತ್ತೇಜಿತವಾಗಿರುವ ಎಡರಂಗ ಈ ಬಾರಿ ಸಂಪೂರ್ಣ ಹೊಸ ತಂಡ ಕಟ್ಟಲು ಮುಂದಾಗಿದೆ. ನಾಯಕ ಎಂಬ ಕಾರಣಕ್ಕೆ ಪಿಣರಾಯಿ ಅವರಿಗೆ ವಿನಾಯ್ತಿ ನೀಡಲಾಗಿದ್ದು, ಅವರ ಹಿಂದಿನ ಸಂಪುಟದಲ್ಲಿದ್ದ ಎಲ್ಲ ಮಂತ್ರಿಗಳಿಗೂ ಕೊಕ್‌ ನೀಡಿದೆ.