ನವದೆಹಲಿ[ಫೆ.26]: ಪೌರತ್ವ ತಿದ್ದುಪಡಿ ಪರ- ವಿರೋಧ ವಾಗಿ ಈಶಾನ್ಯ ದೆಹಲಿಯಲ್ಲಿ ಶನಿವಾರ ಸಣ್ಣ ಪ್ರಮಾಣದಲ್ಲಿ ಆರಂಭವಾಗಿ, ಭಾನುವಾರ- ಸೋಮವಾರಗಳಂದು ಹಿಂಸಾಚಾರಕ್ಕೆ ತಿರುಗಿದ್ದ ಪ್ರತಿಭಟನೆ, ಮಂಗಳವಾರ ಭಾರೀ ರಕ್ತಪಾತಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಗ್ಗೆಯಿಂ ದಲೂ ಜಫ್ರಾಬಾದ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಹಿಂಸಾಚಾರ ನಡೆದಿದ್ದು, 9 ಜನ ಬಲಿಯಾಗಿದ್ದಾರೆ. ಇದರೊಂದಿಗೆ ಸೋಮವಾರದಿಂದೀಚೆಗೆ ಗಲಭೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿದೆ.

ಘಟನೆಯಲ್ಲಿ 50 ಪೊಲೀಸರು ಸೇರಿದಂತೆ 180 ಜನ ಗಾಯಗೊಂಡಿದ್ದು, ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣಾ ವ್ಯಾಪ್ತಿ ಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಜಫ್ರಾಬಾದ್, ಮೌಜ್‌ಪುರ, ಭಜನ್‌ಪುರ ಚೌಕ್, ಚಾಂದ್‌ಬಾಗ್, ಕರ್ವಾಲ್ ನಗರ್, ಖುರೇಜಿ ಖಾಸ್, ಬಾಬರ್‌ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪರಿಸ್ಥಿತಿ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಜೊತೆಗೆ ೬೦೦೦ಕ್ಕೂ ಹೆಚ್ಚು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಜೊತೆಗೆ ಹಿರಿಯ ಐಪಿಎಸ್ ಅಧಿಕಾರಿ ಎಸ್.ಎನ್.ಶ್ರೀವಾಸ್ತವ ಅವರನ್ನು ದೆಹಲಿಯ ಹೊಸ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ)ರನ್ನಾಗಿ ನೇಮಿಸಿ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಸಂಜೆ ಆದೇಶ ಹೊರಡಿಸಿದೆ

ಇದೇ ವೇಳೆ ಸೋಮವಾರದಿಂದೀಚೆಗೆ ನಡೆದ ಹಿಂಸಾ ಚಾರದ ವೇಳೆ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆದಿ ರುವುದು ಬೆಳಕಿಗೆ ಬಂದಿದೆ. ಹಿಂಸಾಚಾರದಲ್ಲಿ ಗಾಯಗೊಂ ಡವರ ಪೈಕಿ ಶೇ.೭೦ರಷ್ಟು ಪ್ರಕರಣಗಳು ಗುಂಡೇಟಿನಿಂದ ಆಗಿದೆ ಎಂಬುದನ್ನು ವೈದ್ಯರೇ ಬಹಿರಂಗಪಡಿಸಿದ್ದಾರೆ. ಹೀಗಾಗಿ ಈಶಾನ್ಯ ದೆಹಲಿಯಲ್ಲಿ ನಡೆದ ಈ ಹಿಂಸಾಚಾರ, ಇಡೀ ದೆಹಲಿಯಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬುಧವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಸಿಬಿಎಸ್‌ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ನಡುವೆ ಇಡೀ ಹಿಂಸಾಚಾರಕ್ಕೆ ಮೂಲವಾಗಿದ್ದ ಜಫ್ರಾಬಾದ್ ಮೆಟ್ರೋ ಸ್ಟೇಷನ್ ಬಳಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರನ್ನು ತೆರವುಗೊಳಿಸಲಾಗಿದೆ.

ಭುಗಿಲೆದ್ದ ಹಿಂಸೆ: ಈಶಾನ್ಯ ದೆಹಲಿಯ ಚಾಂದ್‌ಬಾಗ್, ಭಜನ್ ಪುರ, ಗೋಕುಲ್‌ಪುರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಭಾರೀ ಪ್ರಮಾಣದ ಹಿಂಸಾಚಾರ ನಡೆದಿದೆ.

ಪೌರತ್ವ ಕಾಯ್ದೆ ಪರ ಮತ್ತು ವಿರೋಧಿ ಹೋರಾಟಗಾರರು ರಸ್ತೆಯಲ್ಲಿ ಕಂಡಕಂಡ ಮನೆ, ಅಂಗಡಿ- ಮುಂಗಟ್ಟು ವಾಹನಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಜೊತೆಗೆ ಕಂಡಕಂಡವರ ಮೇಲೆ ದಾಳಿ ನಡೆಸಿದ್ದಾರೆ. ಅಂಗಡಿ - ಮುಂಗಟ್ಟುಗಳಲ್ಲಿನ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಹೀಗಾಗಿ ಈಶಾನ್ಯ ದೆಹಲಿಯ ಹಲವು ಪ್ರದೇಶಗಳು ಅಕ್ಷರಶಃ ಯುದ್ಧದ ತಾಣವೆಂಬಂತೆ ಭಾಸವಾಗುತ್ತಿದೆ. ಎಲ್ಲೆಡೆ ಇಟ್ಟಿಗೆ, ದೊಣ್ಣೆ, ಸುಟ್ಟುಕರಕಲಾದ ವಾಹನಗಳು, ಕಟ್ಟಡಗಳು, ಬೆಂಕಿ ಹತ್ತಿಕೊಂಡಿರುವ ಟೈರ್‌ಗಳು ಪರಿಸ್ಥಿತಿಯ ಭೀಕರತೆಯ ಕಣ್ಣ ಮುಂದೆ ತಂದಿಟ್ಟಿವೆ.

ಭದ್ರತೆಗೆ ನಿಯೋಜಿತವಾಗಿರುವ ಪೊಲೀಸರು, ಪರಿಸ್ಥಿತಿ ವರದಿಗೆ ತೆರಳಿದ್ದ ಹಲವು ಪತ್ರಕರ್ತರ ಮೇಲೂ ದುಷ್ಕರ್ಮಿಗಳು ಪಿಸ್ತೂಲ್, ಪೆಟ್ರೋಲ್ ಬಾಂಬ್, ಖಡ್ಗ, ತಲ್ವಾರ್, ದೊಣ್ಣೆ, ಕಲ್ಲಿನಿಂದ ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ೧೯೮೪ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಬಳಿಕ ಇಷ್ಟು ದೊಡ್ಡ ಮಟ್ಟದ ಹಿಂಸಾಚಾರ ನೋಡಿರಲಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.