* ಝೈಕೋವ್‌ ಲಸಿಕೆಗೆ ಡಿಸಿಜಿಐ ಅನುಮತಿ ಸಾಧ್ಯತೆ* 12+ ಮೇಲ್ಪಟ್ಟಮಕ್ಕಳಿಗೆ ಈ ವಾರವೇ ಲಸಿಕೆಗೆ ಅಸ್ತು?* ಸೂಜಿ ಬಳಸದೇ ನೀಡುವ ಮಾದರಿ ಇಂಜೆಕ್ಷನ್‌ ಇದು

ನವದೆಹಲಿ(ಜು.13): ಅಹಮದಾಬಾದ್‌ ಮೂಲದ ಝೈಡಸ್‌ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ 12 ವರ್ಷ ಮೇಲ್ಪಟ್ಟವಯೋಮಾನದ ಮಕ್ಕಳಿಗೂ ನೀಡಬಹುದಾದ ಕೋವಿಡ್‌ ಲಸಿಕೆಗೆ ಇದೇ ವಾರ ಅನುಮತಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಅನುಮತಿ ಸಿಕ್ಕರೆ, ಅದು ಭಾರತದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದ ಮೊದಲ ಲಸಿಕೆ ಎನ್ನಿಸಿಕೊಳ್ಳಲಿದೆ.

ಝೈಡಸ್‌ ಕಂಪನಿ ತನ್ನ ಲಸಿಕೆಯನ್ನು ಹಿರಿಯರು ಮತ್ತು 12-18ರ ವಯೋಮಾನದ ಮಕ್ಕಳ ಮೇಲೆ ಏಕಕಾಲದಲ್ಲಿ ಪ್ರಯೋಗ ನಡೆಸಿತ್ತು. ಅದರ ವರದಿಯನ್ನು ಅದು ಭಾರತೀಯ ಔಷಧ ನಿಯಂತ್ರಕರಿಗೆ (ಡಿಸಿಜಿಐಗೆ) ಸಲ್ಲಿಸಿದೆ. ವರದಿಯ ಪ್ರಾಥಮಿಕ ಪರಿಶೀಲನೆ ವೇಳೆ ತೃಪ್ತಿ ನೀಡಿದ್ದು, ಅದನ್ನು ಹೆಚ್ಚಿನ ಪರಿಶೀಲನೆಗಾಗಿ ಎಸ್‌ಇಸಿ (ವಿಷಯ ತಜ್ಞರ ಸಮಿತಿ)ಗೆ ಕಳುಹಿಸಿಕೊಡಲಾಗಿದೆ. ಅದು ಶೀಘ್ರ ವರದಿ ಪರಿಶೀಲಿಸುವ ಜೊತೆಗೆ, ಕಂಪನಿಯ ಅಧಿಕಾರಿಗಳಿಂದ ಖುದ್ದು ಮಾಹಿತಿ ಪಡೆಯಲಿದೆ. ಈ ವೇಳೆ ತೃಪ್ತಿಕರ ಮಾಹಿತಿ ಸಿಕ್ಕಲ್ಲಿ, ಲಸಿಕೆಯ ತುರ್ತು ಬಳಕೆಗೆ ಇನ್ನೊಂದು ವಾರದಲ್ಲೇ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

3 ಡೋಸ್‌:

ಝೈಡಸ್‌ ಕಂಪನಿಯ ಲಸಿಕೆ 3 ಡೋಸ್‌ನದ್ದು. ಒಂದು ಡೋಸ್‌ ಪಡೆದ 28 ದಿನಗಳ ಬಳಿಕ ಮತ್ತೊಂದು ಡೋಸ್‌ ಪಡೆದುಕೊಳ್ಳಬೇಕು. ಸೆಪ್ಟೆಂಬರ್‌ ವೇಳೆಗೆ ಲಸಿಕೆ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಸೂಜಿ ಇಲ್ಲ:

ಈ ಲಸಿಕೆಯನ್ನು ನೀಡಲು ಸೂಜಿ ಬಳಸುವುದಿಲ್ಲ. ಬದಲಾಗಿ ವಿಶೇಷ ಉಪಕರಣ ಬಳಸಲಾಗುವುದು. ಒತ್ತಡದ ಮೂಲಕವೇ ಅದು ಚರ್ಮದೊಳಗೆ ಪ್ರವೇಶಿಸುವ ಕಾರಣ ಯಾವುದೇ ನೋವು ಇರುವುದಿಲ್ಲ.

ಬೆಳಗಾವಿಯಲ್ಲೂ ನಡೆದಿತ್ತು ಪ್ರಯೋಗ:

ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ಮಕ್ಕಳ ಮೇಲೆ ಈ ಲಸಿಕೆ ಪ್ರಯೋಗ ನಡೆದಿತ್ತು ಎಂಬುದು ಇಲ್ಲಿ ಗಮನಾರ್ಹ.