ನವದೆಹಲಿ(ಡಿ.17): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಹೊರವಲಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಸುಪ್ರೀಂಕೋರ್ಟ್‌ ಮಧ್ಯಪ್ರವೇಶ ಮಾಡುವ ಸಾಧ್ಯತೆಯಿದ್ದು, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ರೈತರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದನ್ನು ನೇಮಕ ಮಾಡಲು ಮುಂದಾಗಿದೆ.

ರೈತರ ಪ್ರತಿಭಟನೆಯಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಹಾಗೂ ಕೊರೋನಾ ಕೂಡ ಜಾಸ್ತಿಯಾಗಬಹುದು ಎಂದು ಆಕ್ಷೇಪಿಸಿ ಸುಪ್ರೀಂಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ವಿಚಾರಣೆಯನ್ನು ಬುಧವಾರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಸಿದ ನ್ಯಾಯಪೀಠ, ‘ನಿಮ್ಮ ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಅದು ಖಂಡಿತ ವಿಫಲವಾಗುತ್ತದೆ. ಈಗಲೂ ನೀವು ಮಾತುಕತೆಗೆ ಸಿದ್ಧರಿದ್ದೇವೆ ಎಂದೇ ಹೇಳುತ್ತಿದ್ದೀರಿ’ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬಳಿ ಆಕ್ಷೇಪ ವ್ಯಕ್ತಪಡಿಸಿತು. ಅಲ್ಲದೆ, ಇದು ಸದ್ಯದಲ್ಲೇ ರಾಷ್ಟ್ರೀಯ ವಿವಾದವಾಗಬಹುದು. ಹೀಗಾಗಿ ಬಿಕ್ಕಟ್ಟು ಶಮನಕ್ಕೆ ದೇಶದ ವಿವಿಧೆಡೆಗಳಿಂದ ರೈತರ ಪ್ರತಿನಿಧಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸೋಣ. ಅದರಲ್ಲಿ ಯಾರಾರ‍ಯರಿರಬೇಕು ಎಂಬ ಪಟ್ಟಿಕೊಡಿ ಎಂದು ಸೂಚಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

‘ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ರೈತ ಸಂಘಟನೆಗಳ ಪ್ರಮುಖರು ಕಾಯ್ದೆ ರದ್ದುಪಡಿಸದಿದ್ದರೆ ನಾವು ಮಾತುಕತೆಯನ್ನೇ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ’ ಎಂದು ತುಷಾರ್‌ ಮೆಹ್ತಾ ಇದಕ್ಕೂ ಮುನ್ನ ಅಸಹಾಯಕತೆ ವ್ಯಕ್ತಪಡಿಸಿದ್ದರು.