ನವದೆಹಲಿ(ಆ.12): 2005ರ ಹಿಂದು ಉತ್ತರಾಧಿಕಾರ ಕಾಯ್ದೆ (ತಿದ್ದುಪಡಿ) ಜಾರಿಗೆ ಬರುವುದಕ್ಕಿಂತ ಮೊದಲೇ ಹಿಂದು ಅವಿಭಕ್ತ ಕುಟುಂಬದಲ್ಲಿ ತಂದೆ ಮೃತರಾಗಿದ್ದರೂ ಮಗಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಸಿಗುತ್ತದೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ.

‘ಒಮ್ಮೆ ಪುತ್ರಿಯಾದವಳು ಯಾವಾಗಲೂ ಪುತ್ರಿಯೇ ಆಗಿರುತ್ತಾಳೆ. ಮಗ ಮದುವೆಯಾಗುವವರೆಗೆ ಮಾತ್ರ ಮಗನಾಗಿರುತ್ತಾನೆ. ಹೀಗಾಗಿ ಪುತ್ರಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಆಕೆಯ ಜೀವನಪರ್ಯಂತ ಸಮಾನ ಹಕ್ಕಿರುತ್ತದೆ. ಆಕೆ ಜನಿಸಿದ ದಿನಾಂಕಕ್ಕೂ ಹಕ್ಕಿಗೂ ಸಂಬಂಧವಿಲ್ಲ. ಹಾಗೆಯೇ, ತಂದೆ ಬದುಕಿರಲಿ ಅಥವಾ ಬದುಕಿಲ್ಲದೆ ಇರಲಿ, ಆಕೆಗೆ ಸಮಾನ ಹಕ್ಕಿರುತ್ತದೆ’ ಎಂದು ನ್ಯಾ| ಅರುಣ್‌ ಮಿಶ್ರಾ ಅವರ ತ್ರಿಸದಸ್ಯ ಪೀಠ ಮಂಗಳವಾರ ನೀಡಿರುವ ಆದೇಶದಲ್ಲಿ ತಿಳಿಸಿದೆ.

3 ಕೋಟಿ ಆಸ್ತಿಗಾಗಿ 79 ವರ್ಷದ ತಂದೆಯನ್ನು ಬೀದಿಗೆ ಬಿಟ್ಟ 'ಸುಪುತ್ರರು'!

ಹಿಂದು ಉತ್ತರಾಧಿಕಾರ ಕಾಯ್ದೆ-1956ರ ಸೆಕ್ಷನ್‌ 6ರ ಪ್ರಕಾರ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಇದಕ್ಕೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆ 2005ರ ಸೆ.9ರಂದು ಜಾರಿಗೆ ಬಂದಿದೆ. ಆದರೆ, ಈ ತಿದ್ದುಪಡಿ ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆಯೋ ಅಥವಾ 2005ರ ಸೆ.9ರಿಂದ ಜಾರಿಗೆ ಬರುತ್ತದೆಯೋ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ಈ ಹಿಂದೆ ಗೊಂದಲದ ತೀರ್ಪುಗಳನ್ನು ನೀಡಿತ್ತು. ಹೀಗಾಗಿ ಜಾರಿ ನ್ಯಾಯಾಲಯಗಳು ಇಲ್ಲಿಯವರೆಗೆ ‘2005ರ ಸೆ.9ರಂದು ತಂದೆ ಮತ್ತು ಮಗಳು ಇಬ್ಬರೂ ಬದುಕಿದ್ದರೆ ಮಾತ್ರ ಮಗಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಸಿಗುತ್ತದೆ’ ಎಂಬರ್ಥದಲ್ಲಿ ತೀರ್ಪು ನೀಡುತ್ತಿದ್ದವು. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಅರ್ಜಿಗಳಿಗೆ ಸಂಬಂಧಿಸಿದ ಗೊಂದಲಗಳಿಗೆ ತೆರೆ ಎಳೆದಿರುವ ತ್ರಿಸದಸ್ಯ ಪೀಠ, ಸಮಾನ ಹಕ್ಕುದಾರಿಕೆ ಎಂಬುದು ಹುಟ್ಟಿನಿಂದಲೇ ಬರುವುದರಿಂದ ಸೆ.9, 2005ಕ್ಕೆ ತಂದೆ ಬದುಕಿದ್ದರೆ ಮಾತ್ರ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಸಿಗುತ್ತದೆ ಎಂದು ಪರಿಗಣಿಸಬಾರದು. ಹಿಂದು ಉತ್ತರಾಧಿಕಾರ ಕಾಯ್ದೆಗೆ ಮಾಡಿದ ತಿದ್ದುಪಡಿಯು ಪೂರ್ವಾನ್ವಯವಾಗುತ್ತದೆ ಎಂದು 121 ಪುಟಗಳ ತೀರ್ಪಿನಲ್ಲಿ ಹೇಳಿದೆ.

'ಬೆಡ್‌ ಸಿಕ್ತಿಲ್ಲ': ನೆರವಿಗಾಗಿ ಸೋನು ಸೂದ್‌ನತ್ತ ನೋಡ್ತಿದ್ದಾರೆ ಜನ..!

ಅಲ್ಲದೆ, ಈ ಕುರಿತ ಗೊಂದಲದಿಂದ ಜಾರಿ ನ್ಯಾಯಾಲಯಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕು. 2004ರ ಡಿ.20ಕ್ಕೂ ಮುನ್ನ ಆಸ್ತಿ ವಿಭಜನೆಯಾಗಿ ಮಗಳಿಗೆ ಸಮಾನ ಹಕ್ಕು ದೊರೆತಿಲ್ಲದೆ ಇದ್ದರೆ ಸೆ.9, 2005ರಿಂದ ಜಾರಿಗೆ ಬರುವಂತೆ ಆಕೆ ಸಮಾನ ಹಕ್ಕನ್ನು ಕೇಳಬಹುದು ಎಂದೂ ನ್ಯಾಯಪೀಠ ತಿಳಿಸಿದೆ

ಪುತ್ರಿ ಯಾವತ್ತಿಗೂ ಪುತ್ರಿಯೇ

ಒಮ್ಮೆ ಪುತ್ರಿಯಾದವಳು ಯಾವಾಗಲೂ ಪುತ್ರಿಯೇ ಆಗಿರುತ್ತಾಳೆ. ಮಗ ಮದುವೆಯಾಗುವವರೆಗೆ ಮಾತ್ರ ಮಗನಾಗಿರುತ್ತಾನೆ. ಹೀಗಾಗಿ ಪುತ್ರಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಆಕೆಯ ಜೀವನಪರ್ಯಂತ ಸಮಾನ ಹಕ್ಕಿರುತ್ತದೆ. 2004ರ ಡಿ.20ಕ್ಕೂ ಮುನ್ನ ಆಸ್ತಿ ವಿಭಜನೆಯಾಗಿ ಮಗಳಿಗೆ ಸಮಾನ ಹಕ್ಕು ದೊರೆತಿಲ್ಲದೆ ಇದ್ದರೆ ಸೆ.9, 2005ರಿಂದ ಜಾರಿಗೆ ಬರುವಂತೆ ಆಕೆ ಸಮಾನ ಹಕ್ಕನ್ನು ಕೇಳಬಹುದು.

- ಸುಪ್ರೀಂಕೋರ್ಟ್