Punjab Elections: 'ದಿ ಗ್ರೇಟ್ ಖಲಿ' ಬಿಜೆಪಿಗೆ: ಕೃಷಿ ಕಾನೂನು ವಿರೋಧಿಸಿದ್ದ ರಾಣಾರಿಂದ ಮೋದಿ ಹೊಗಳಿಕೆ!
* ಮಾಜಿ ‘WWE’ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಬಿಜೆಪಿಗೆ
* ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆ
* ಮೋದಿ ಕೆಲಸಗಳೇ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲಿದೆ
ನವದೆಹಲಲಿ(ಫೆ.10): 'ದಿ ಗ್ರೇಟ್ ಖಲಿ’ ಖ್ಯಾತಿಯ, ಮಾಜಿ ‘WWE’ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಗುರುವಾರದಂದು ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಷ್ಟ್ರ ರಾಜಧಾನಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ದಿ ಗ್ರೇಟ್ ಖಲಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಷ್ಟ್ರೀಯ ನಾಯಕರು ದಲೀಪ್ ಸಿಂಗ್ ರಾಣಾರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡಡಿದ್ದಾರೆ.
ಫೆಬ್ರವರಿ 20 ರಂದು ಪಂಜಾಬ್ ಚುನಾವಣೆ ನಡೆಯಲಿದೆ. ಹೀಗಿರುವಾಗ ಚುನಾವಣಾ ಹೊಸ್ತಿಲಲ್ಲೇ ದಲೀಪ್ ಸಿಂಗ್ ರಾಣ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಇನ್ನು ಪಂಜಾಬ್‌ನಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಖಲಿ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜಿತೇಂದ್ರ ಸಿಂಗ್, ದಿ ಗ್ರೇಟ್ ಖಲಿ ಅವರು ನಮ್ಮ ಪಕ್ಷಕ್ಕೆ ಸೇರುವ ಮೂಲಕ ಅನೇಕ ಯುವಕರಿಗೆ ಮತ್ತು ದೇಶದ ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ದಲೀಪ್ ಸಿಂಗ್ ರಾಣಾ ಬಿಜೆಪಿ ಸೇರಿದ್ದಕ್ಕೆ ನನಗೆ ಖುಷಿಯಾಗಿದೆ. ಪ್ರಧಾನಿ ಮೋದಿಯವರು ದೇಶಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕೆಲಸಗಳೇ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲಿದೆ. ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದ ಭಾಗವಾಗವಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಹಾಗಾಗಿ ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾಗಿ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತನಾಡಿ, ‘ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿದೆ. ಈ ಪಕ್ಷಕ್ಕೆ ವಿಶ್ವದ ಹಲವು ಖ್ಯಾತ ಕುಸ್ತಿಪಟುಗಳನ್ನು ಸೋಲಿಸಿದ ಮಹಾನ್ ಖಲಿ ಸೇರ್ಪಡೆಯಾಗಿದ್ದಾರೆ. ರೈತನ ಮಗ, ಪಂಜಾಬ್ ಪೊಲೀಸ್ ಇಲಾಖೆಯಲ್ಲಿಯೂ ಅಧಿಕಾರಿಯಾಗಿ ಸೇವೆ ಸಲ್ಲಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಆಪ್ ಪರ ಪ್ರಚಾರ ನಡೆಸಿರುವ ಖಲಿ
ದಿಲೀಪ್ ಸಿಂಗ್ ರಾಣಾ ಡಬ್ಲ್ಯುಡಬ್ಲ್ಯೂಇಯಂತಹ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಎಲ್ಲಾ ಪ್ರಮುಖ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ. 49 ವರ್ಷದ ಖಲಿ ಅವರು ಮಾಜಿ ವಿಶ್ವ ಹೆವಿವೇಟ್ ಚಾಂಪಿಯನ್ ಆಗಿದ್ದು, ಅವರು 2021 ರ WWE ಹಾಲ್ ಆಫ್ ಫೇಮ್ ಕ್ಲಾಸ್‌ಗೆ ಸೇರ್ಪಡೆಗೊಂಡಿದ್ದಾರೆ. ಖಲಿ ಅವರ ಉದ್ದ 7 ಅಡಿ 1 ಇಂಚು, ಈ ಕಾರಣದಿಂದಾಗಿ ಸಾಕಷ್ಟು ಚರ್ಚೆಯೂ ನಡೆದಿತ್ತು. ಅವರು 2006 ರಲ್ಲಿ ತಮ್ಮ WWE ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ಕಳೆದ ಹಲವಾರು ವರ್ಷಗಳಿಂದ, ಅವರು WWE ನಿಂದ ದೂರವನ್ನು ಕಾಯ್ದುಕೊಂಡಿದ್ದಾರೆ. ಖಲಿ ಈಗಾಗಲೇ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದಾರೆ. ದಿಲೀಪ್ ಸಿಂಗ್ ರಾಣಾ ಅವರು 2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಖಲಿ ಎಎಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳಿದ್ದಾಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವರು ಆಗಮಿಸಿದ್ದರು. ಇದಾದ ಬಳಿಕ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಆದರೆ, ಕೇಜ್ರಿವಾಲ್ ಮತ್ತು ಅಖಿಲೇಶ್ ಅವರನ್ನು ಭೇಟಿಯಾದ ನಂತರ ಖಲಿ, ಪ್ರಸ್ತುತ ಅಂತಹ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದರು.
ಖಲಿ WWEಯಲ್ಲಿ ವೃತ್ತಿಯನ್ನು ಆರಂಭಿಸುವ ಮುನ್ನ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರ ಬಾಡಿಗಾರ್ಡ್ ಆಗಿದ್ದರು. ಆದರೆ WWEಯಲ್ಲಿ ವೃತ್ತಿಯನ್ನು ಆರಂಭಿಸಿದ ನಂತರ ಖಲಿ ಅವರು ಚಾಂಪಿಯನ್ ಪಟ್ಟಗಳಿಸಿದರು. ಅಲ್ಲದೇ ಹಾಲಿವುಡ್‍ನ ನಾಲ್ಕು ಸಿನಿಮಾ ಹಾಗೂ ಬಾಲಿವುಡ್‍ನ ಎರಡು ಸಿನಿಮಾಗಳಲ್ಲಿ ಖಲಿ ಅಭಿನಯಿಸಿದ್ದಾರೆ.
ಕೃಷಿ ಕಾನೂನುಗಳನ್ನು ವಿರೋಧಿಸಿದ್ದ ಖಲಿ
ದಿಲೀಪ್ ಸಿಂಗ್ ರಾಣಾ ಅಲಿಯಾಸ್ ದಿ ಗ್ರೇಟ್ ಖಲಿ ಕೃಷಿ ಕಾನೂನುಗಳನ್ನು ವಿರೋಧಿಸಿದ್ದರು. ರೈತ ಚಳವಳಿಯ ಸಂದರ್ಭದಲ್ಲಿ ರೈತರು ದೇಶದ ಬೆನ್ನೆಲುಬು ಎಂದು ಹೇಳಿದ್ದರು. ಅವರು ದೇಶದ ಪ್ರತಿಯೊಬ್ಬ ರೈತರೊಂದಿಗೆ ನಿಂತಿದ್ದಾರೆ. ಸರ್ಕಾರದ ತಪ್ಪು ನೀತಿಯಿಂದಾಗಿ ರೈತರು ಬೀದಿಗೆ ಬಿದ್ದಿದ್ದಾರೆ. ರೈತರ ಮೇಲೆ ಬಲವಂತವಾಗಿ ಯಾವುದೇ ಕಾನೂನನ್ನು ಹೇರಿದರೆ ಅಂತಹುದೇ ಧರಣಿ, ಪ್ರತಿಭಟನೆ ನಡೆಸಲಾಗುವುದು. ನಾನು ರೈತನ ಮಗ ಎಂದು ಹೇಳಿದ್ದರು. ನಾನು ರೈತರ ಹೋರಾಟ ಮತ್ತು ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಕೇಂದ್ರ ಸರ್ಕಾರ ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಗುಡುಗಿದ್ದರು.