* ಆಂಧ್ರ, ಒಡಿಶಾ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಮಳೆ* ನಾಲ್ಕೂ ರಾಜ್ಯಗಳಲ್ಲಿ ಯಾವುದೇ ಅನಾಹುತ ಇಲ್ಲ* ದುರ್ಬಲವಾದ ಗುಲಾಬ್ ಚಂಡಮಾರುತ
ಭುವನೇಶ್ವರ/ವಿಜಯವಾಡ(ಸೆ.28): ಭಾರೀ ಭೀತಿ ಹುಟ್ಟುಹಾಕಿದ್ದ ಗುಲಾಬ್ ಚಂಡಮಾರುತ(Gulab Cyclone) ಸೋಮವಾರ ದುರ್ಬಲಗೊಂಡ, ತೀವ್ರ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗಿದೆ. ಹೀಗಾಗಿ ಕರಾವಳಿ ರಾಜ್ಯಗಳು(Coastal States) ನಿಟ್ಟುಸಿರು ಬಿಡುವಂತಾಗಿದೆ.
ಆದರೆ ಚಂಡಮಾರುತದ ಪರಿಣಾಮ ಭಾನುವಾರದಿಂದೀಚೆಗೆ ಒಡಿಶಾ(Odoisha), ಆಂಧ್ರ, ತೆಲಂಗಾಣ, ಛತ್ತೀಸ್‌ಗಢದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯ(Rain) ಮುನ್ಸೂಚನೆಯನ್ನೂ ನೀಡಲಾಗಿದೆ.
ಅಲ್ಲದೆ ಮುಂದಿನ 12 ಗಂಟೆಗಳ ಕಾಲ ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ ಮತ್ತು ವಾಯುವ್ಯ ಭಾಗಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ಆಂಧ್ರಪ್ರದೇಶ ಮತ್ತು ಒಡಿಶಾದ(Odisha) ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಚಂಡಮಾರುತದ ಘಟನೆಗಳಲ್ಲಿ ಸಾವಿಗೀಡಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಒಡಿಶಾದಲ್ಲಿ ಚಂಡಮಾರುತವನ್ನು ಎದುರಿಸಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದರಿಂದಾಗಿ ಈ ಚಂಡಮಾರುತದಿಂದ ಅಷ್ಟೇನೂ ಪರಿಣಾಮವಾಗಿಲ್ಲ ಎಂದು ಒಡಿಶಾ ಸರ್ಕಾರ ಹೇಳಿದೆ. ಚಂಡಮಾರುತದ ಅವಘಡಗಳಲ್ಲಿ ಸಿಲುಕಬಹುದಾದ 1533 ಗರ್ಭಿಣಿ ಮಹಿಳೆಯರು ಸೇರಿದಂತೆ ಒಟ್ಟಾರೆ 46 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸರ್ಕಾರ ಸುರಕ್ಷಿತ ಸ್ಥಳಕ್ಕೆ ರವಾನಿಸಿತ್ತು
6 ಮೀನುಗಾರರು ಬಲಿ?:
ಗುಲಾಬ್ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುಂಚಿತವಾಗಿ ಶ್ರೀಕಾಕುಳಂ ಜಿಲ್ಲೆಯ 6 ಮಂದಿ ಮೀನುಗಾರರು ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ಗುಲಾಬ್‌ಗೆ ಸಿಲುಕಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಶೂನ್ಯ ಸಾವಿನ ಗುರಿ: ಒಡಿಶಾ ಸಿಎಂ
ಗುಲಾಬ್ ಅಪ್ಪಳಿಸುವ ಮುನ್ನ ಮಾತನಾಡಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ‘ನಾವು ಸಾವು-ನೋವಿನ ಗುರಿ ಹೊಂದಿದ್ದೇವೆ. ಗುಲಾಬ್ ಪ್ರಭಾವಕ್ಕೆ ಸಿಲುಕಿರುವ 7 ಜಿಲ್ಲೆಗಳಲ್ಲಿ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಸಣ್ಣ-ಪುಟ್ಟಅನಾಹುತವಾಗದಂತೆ ತಡೆಯುವುದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಇರಬೇಕು’ ಎಂದು ತಿಳಿಸಿದ್ದಾರೆ.
