ರಾಮ ಮಂದಿರಕ್ಕೆ ಬಾಂಬ್ ಬೆದರಿಕೆಯ ಮೂಲ ಪತ್ತೆ ಹಚ್ಚಿದ ಪೊಲೀಸ್,ದೇವಸ್ಥಾನ ಭದ್ರತೆ ಹೆಚ್ಚಳ
ಆಯೋಧ್ಯೆ ಶ್ರೀರಾಮ ಮಂದಿರದ ಮೇಲ ಪವಿತ್ರ ಕಳಶ ಪ್ರತಿಷ್ಠಾಪಿಸಿದ ಬೆನ್ನಲ್ಲೇ ಎದುರಾದ ಬಾಂಬ್ ಬೆದರಿಕೆಯಿಂದ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಬೆದರಿಕೆ ಹಾಕಿದ ಮೂಲ ಎಲ್ಲಿ ಅನ್ನೋದು ಸೈಬರ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆಯೋಧ್ಯೆ(ಏ.15) ಆಯೋಧ್ಯೆ ಶ್ರೀರಾಮ ಮಂದಿರದ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದೆ. ಇತ್ತೀಚೆಗಷ್ಟೇ ರಾಮ ಮಂದಿರದ ಮೇಲೆ ಪವಿತ್ರ ಕಳಶ ಪ್ರತಿಷ್ಟಾಪಿಸಲಾಗಿದೆ. ಇದರ ಬೆನ್ನಲ್ಲೇ ರಾಮ ಮಂದಿರಕ್ಕೆ ಬಂದ ಬಾಂಬ್ ಬೆದರಿಕೆ ಇಮೇಲ್ ಆತಂಕ ಸೃಷ್ಟಿಸಿದೆ. ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್‌ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಇಮೇಲ್ ಬೆನ್ನಲ್ಲೇ ಸ್ಥಳೀಯ ಪೊಲೀಸ್ ಪಡೆ ಕಾರ್ಯಪ್ರವೃತ್ತಗೊಂಡಿದೆ. ಒಂದೆಡೆಯಿಂದ ರಾಮ ಮಂದಿರದ ಭದ್ರತೆ ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೇ ಸೈಬರ್ ಪೊಲೀಸರು ಈ ಬೆದರಿಕೆ ಬಂದ ಮೂಲ ಪತ್ತೆ ಹಚ್ಚಿದ್ದಾರೆ. ಸೈಬರ್ ಪೊಲೀಸರ ಪ್ರಕಾರ ತಮಿಳುನಾಡಿನಿಂದ ಈ ಬೆದರಿಕೆ ಇಮೇಲ್ ಕಳುಹಿಸಲಾಗಿದೆ ಎಂದಿದೆ.
ನಾಲ್ಕು ಕಡೆ ಬಾಂಬ್ ಬೆದರಿಕೆ
ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿ ಟ್ರಸ್ಟ್‌ಗೆ ಸೋಮವಾರ ರಾತ್ರಿ ಬೆದರಿಕೆ ಇಮೇಲ್ ಬಂದಿದೆ. ಈ ಇಮೇಲ್‌ನಲ್ಲಿ ರಾಮ ಮಂದಿರದ ನಿರ್ಮಾಣ ಸ್ಥಳದಲ್ಲಿ ಬಾಂಬ್ ಸ್ಫೋಟಿಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ನಾಲ್ಕು ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ಭದ್ರತಾ ಪಡೆಗಳು ರಾಮ ಮಂದಿರ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವೆಡೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಬೆದರಿಕೆಯನ್ನು ಗಂಭೀರವಾಗಿ ಪರಗಣಿಸಿರುವ ಪೊಲೀಸರು ರಾಮ ಮಂದಿರ ಸೇರಿದಂತೆ ಹಲೆವಡೆ ಭದ್ರತೆ ಹೆಚ್ಚಿಸಿದ್ದಾರೆ.
ಸ್ಥಳೀಯ ಪೊಲೀಸರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿದ್ದಾರೆ, ಸೈಬರ್ ಸೆಲ್ ಬೆದರಿಕೆಯ ಮೂಲವನ್ನು ಸಕ್ರಿಯವಾಗಿ ತನಿಖೆ ನಡೆಸಿದೆ. ಈ ವೇಳೆ ತಮಿಳುನಾಡಿನಿಂದ ಈ ಬೆದರಿಕೆ ಇಮೇಲ್ ಕಳುಹಿಸಿರುವುದು ಪತ್ತೆಯಾಗಿದೆ. ಇದೀಗ ಸೈಬರ್ ಪೊಲೀಸರು ತಂಡ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಇತ್ತ ಸ್ಥಳೀಯ ಪೊಲೀಸರು ರಾಮ ಮಂದಿರ ಸುತ್ತ ಮುತ್ತಲೂ ಭದ್ರತೆ ಹೆಚ್ಚಿಸಿದ್ದಾರೆ
ವಕ್ಫ್ ಪ್ರತಿಭಟನೆ ಬೆನ್ನಲ್ಲೇ ಆತಂಕ ತಂದ ಬೆದರಿಕೆ
ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಹಲವೆಡೆ ವಕ್ಪ್ ಬಿಲ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಇತ್ತ ವಕ್ಫ್ ಪ್ರತಿಭಟನೆಯಲ್ಲಿ ಬಾಂಗ್ಲಾದೇಶದ ನಿಷೇಧಿತ ಸಂಘಟನೆಗಳ ಕೈವಾಡದ ಕುರಿತು ಕೇಂದ್ರ ತನಿಖಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ರಾಮ ಮಂದಿರಕ್ಕೆ ಬೆದರಿಕೆ ಬಂದಿದೆ. ಹೀಗಾಗಿ ಎಲ್ಲಾ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.