Asianet Suvarna News Asianet Suvarna News

ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿ ಮಸೂದೆ ಮಂಡನೆ ಅನುಮಾನ!

* ಜಾಗತಿಕತೆಗೆ ಅನ್ವಯವಾಗುವಂತೆ ಕಾನೂನು ರೂಪಿಸಲು ಚಿಂತನೆ

* ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿ ಮಸೂದೆ ಮಂಡನೆ ಅನುಮಾನ

* ಈ ಬಗ್ಗೆ ಮತ್ತಷ್ಟುಚರ್ಚಿಸುವ ಅಗತ್ಯವಿದೆ: ಸರ್ಕಾರ ಮೂಲಗಳು

Cryptocurrency bill unlikely to be introduced in winter session of Parliament Govt sources pod
Author
Bangalore, First Published Dec 16, 2021, 6:30 AM IST

ನವದೆಹಲಿ(ಡಿ.16): ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ರದ್ದುಗೊಳಿಸುವ ಮತ್ತು ದೇಶೀಯ ಕ್ರಿಪ್ಟೋ ಕರೆನ್ಸಿ ಬಿಡುಗಡೆಗೆ ಅನುವು ಮಾಡಿಕೊಡುವ ಕ್ರಿಪ್ಟೋ ಕರೆನ್ಸಿ ಮತ್ತು ಡಿಜಿಟಲ್‌ ಕರೆನ್ಸಿ ನಿಯಂತ್ರಣ-2021 ಮಸೂದೆಯನ್ನು ಹಾಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸುವ ಸಾಧ್ಯತೆಯಿಲ್ಲ. ಈ ಪ್ರಸ್ತಾಪಿತ ವಿಧೇಯಕದಲ್ಲಿ ಕೆಲ ಬದಲಾವಣೆಗಳು ಮತ್ತು ಜಾಗತಿಕ ಮಟ್ಟಕ್ಕೆ ಸರಿಹೊಂದುವಂತೆ ಕ್ರಿಪ್ಟೋ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ಹೆಚ್ಚಿನ ಸಮಾಲೋಚನೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಸದ್ಯಕ್ಕೆ ಈ ಮಸೂದೆ ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದೇ ಅಧಿವೇಶನದ ಅವಧಿಯಲ್ಲಿ ಈ ಮಸೂದೆ ಮಂಡನೆ ಸರ್ಕಾರದ ಅಜೆಂಡಾವಾಗಿತ್ತು. ಕೇಂದ್ರೀಯ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ(ಸಿಬಿಡಿಸಿ)ಯನ್ನು ಕ್ರಿಪ್ಟೋ ಕಾನೂನಡಿ ತರಬೇಕೋ ಅಥವಾ ಆರ್‌ಬಿಐ ಕಾಯ್ದೆಯಡಿ ತರಬೇಕೋ ಎಂಬ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಜತೆಗೆ ಈ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಕ್ರಿಪ್ಟೋ ಕಾನೂನುಗಳು ಜಾಗತಿಕ ಮಟ್ಟದಲ್ಲಿ ಅನ್ವಯವಾಗುವಂತೆ ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮತ್ತಷ್ಟುಕಾಲ ಕಾಯುವುದೇ ಸರಿ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಅಲ್ಲದೆ ಈಗಿರುವ ಕಾನೂನಿನ ಅಡಿಯೇ ಕ್ರಿಪ್ಟೋ ಕರೆನ್ಸಿ ಮೇಲೆ ನಿಯಂತ್ರಣ, ತೆರಿಗೆ ಮತ್ತು ಗ್ರಾಹಕರ ಹಿತರಕ್ಷಣೆ ಮಾಡುವ ಬಗ್ಗೆಯೂ ಸರ್ಕಾರ ಒಲವು ಹೊಂದಿದೆ. ಈ ಎಲ್ಲಾ ಕಾರಣಗಳಿಂದ ಕ್ರಿಪ್ಟೋ ಮಸೂದೆ ಬಗ್ಗೆ ಹೆಚ್ಚಿನ ಚರ್ಚೆಗಳ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಇತ್ತೀಚೆಗಷ್ಟೇ ಬಿಜೆಪಿ ಸಂಸದ ಜಯಂತ್‌ ಸಿನ್ಹಾ ಆರ್ಥಿಕತೆಯ ಸ್ಥಾಯಿ ಸಮಿತಿಯನ್ನು ಭೇಟಿ ಮಾಡಿದ್ದ ಕ್ರಿಪ್ಟೋ ವಿನಿಮಯಕಾರರು ಮತ್ತು ಬ್ಲಾಕ್‌ಚೈನ್‌ ಮತ್ತು ಕ್ರಿಪ್ಟೋ ಅಸೆಟ್ಸ್‌ ಕೌನ್ಸಿಲ್‌ ಪ್ರತಿನಿಧಿಗಳು, ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಷೇಧ ಬೇಡ. ಬದಲಿಗೆ ನಿಯಂತ್ರಣ ಹೇರಿ ಎಂದು ಕೋರಿಕೊಂಡಿದ್ದಾರೆ. ಏತನ್ಮಧ್ಯೆ, ಕ್ರಿಪ್ಟೋ ಕರೆನ್ಸಿಯಿಂದ ಸಮಗ್ರ ಆರ್ಥಿಕತೆ ಮತ್ತು ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗಲಿದೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿತ್ತು. ಈ ಎಲ್ಲಾ ಕಾರಣಗಳಿಂದ ಕ್ರಿಪ್ಟೋ ಕರೆನ್ಸಿ ನಿಷೇಧದ ಮಸೂದೆ ಮಂಡನೆಯನ್ನು ಕಾದು ನೋಡುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ.

ಸಚಿವ ಸಂಪುಟದ ಅಂಗಳದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ!

 

ಭಾರತದಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ನಿಯಂತ್ರಣಕ್ಕೆ ಸರ್ಕಾರ ಕಾನೂನು ರೂಪಿಸುತ್ತದೆಯೋ ಇಲ್ಲವೋ  ಎಂಬ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ಈಗಾಗಲೇ ಹುಟ್ಟಿಕೊಂಡಿವೆ. ಈ ಸಂಬಂಧ ಸರ್ಕಾರದ ದ್ವಂದ್ವ ಹೇಳಿಕೆಗಳು ಕೂಡ ಜನರಲ್ಲಿ ಗೊಂದಲ ಮೂಡಿಸಿವೆ.  ಆದ್ರೆ ಕೊನೆಗೂ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆಯು( Cryptocurrency and Regulation of Official Digital Currency Bill) ಸಚಿವ ಸಂಪುಟದ ಅಂತಿಮ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನು ನೀಡಿದೆ. 

ಲೋಕಸಭೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರೋ ಕ್ರಿಪ್ಟೋಕರೆನ್ಸಿ ಪ್ರಭಾವದ ಕುರಿತ ಪ್ರಶ್ನೆಗೆ ಉತ್ತರಿಸೋ ಸಂದರ್ಭದಲ್ಲಿ ಹಣಕಾಸು ಸಚಿವಾಲಯದ( Ministry of Financ)ರಾಜ್ಯ ಸಚಿವರು(Minister of State) ಈ ಮಾಹಿತಿ ನೀಡಿದ್ದಾರೆ. 2013ರ ಡಿಸೆಂಬರ್ ನಿಂದ ಈ ತನಕ ವರ್ಚುವಲ್ ಕರೆನ್ಸಿಗಳನ್ನು (Virtual Currencies) ಹೊಂದಿರೋರು, ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ಆರ್ ಬಿಐ (RBI) ಮೂರು ಬಾರಿ ಎಚ್ಚರಿಕೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ. 'ವರ್ಚುವಲ್ ಕರೆನ್ಸಿಗಳನ್ನು  (Virtual Currencies) ಹೊಂದಿರೋರು, ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ಡಿಸೆಂಬರ್  24, 2013, ಫೆಬ್ರವರಿ 1, 2017 ಹಾಗೂ ಡಿಸೆಂಬರ್ 5, 2017 ಹೀಗೆ ಮೂರು ಬಾರಿ ಆರ್ ಬಿಐ ಸಾರ್ವಜನಿಕ ನೋಟಿಸ್ ಮೂಲಕ ಎಚ್ಚರಿಕೆ ನೀಡಿದೆ. ವರ್ಚುವಲ್ ಕರೆನ್ಸಿಗಳ ವಹಿವಾಟುಗಳಲ್ಲಿ ಆರ್ಥಿಕ(Economical), ಹಣಕಾಸು(Financial), ಕಾರ್ಯನಿರ್ವಹಣೆ, ಕಾನೂನಾತ್ಮಕ(Legal), ಗ್ರಾಹಕರ ಹಿತರಕ್ಷಣೆ ಹಾಗೂ ಭದ್ರತೆಗೆ ಸಂಬಂಧಿಸಿದ ಸಂಭವನೀಯ ಅಪಾಯಗಳಿವೆ ಎಂಬ ಎಚ್ಚರಿಕೆಯನ್ನು ಆರ್ ಬಿಐ ಈ ನೋಟಿಸ್ ಗಳ ಮೂಲಕ  ನೀಡಿತ್ತು.

Follow Us:
Download App:
  • android
  • ios