ಕೊಚ್ಚಿ(ನ.14): ಮಾದಕ ವಸ್ತು ದಂಧೆ ಸಂಬಂಧ ತಮ್ಮ ಪುತ್ರ ಬಿನೀಶ್‌ ಬೆಂಗಳೂರಿನಲ್ಲಿ 14 ದಿನ ಜೈಲುಪಾಲಾದ ಬೆನ್ನಲ್ಲೇ ಅನಾರೋಗ್ಯದ ಕಾರಣ ನೀಡಿ ಕೇರಳ ಸಿಪಿಎಂ ಘಟಕದ ನಂ.2 ನಾಯಕರಾಗಿರುವ ಕೊಡಿಯೇರಿ ಬಾಲಕೃಷ್ಣನ್‌ ಅವರು ಕಾರ್ಯದರ್ಶಿ ಸ್ಥಾನದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಎ. ವಿಜಯರಾಘವನ್‌ ಅವರಿಗೆ ಸದ್ಯದ ಮಟ್ಟಿಗೆ ಕಾರ್ಯದರ್ಶಿ ಸ್ಥಾನವನ್ನು ನೀಡಲಾಗಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕೃಷ್ಣನ್‌ ಅವರು ಸುದೀರ್ಘ ರಜೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ದೀರ್ಘ ರಜೆ ನೀಡಲು ನಿರ್ಧರಿಸಲಾಯಿತು ಎಂದು ಶುಕ್ರವಾರ ಇಲ್ಲಿ ನಡೆದ ಪಕ್ಷದ ಹಿರಿಯರ ಸಭೆ ಬಳಿಕ ಮಾಹಿತಿ ನೀಡಲಾಗಿದೆ.

ಬೆಂಗಳೂರಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿರುವ ಮಹಮ್ಮದ್‌ ಅನೂಪ್‌ ಎಂಬಾತ ನೀಡಿದ ಮಾಹಿತಿ ಆಧರಿಸಿ ಬಾಲಕೃಷ್ಣನ್‌ ಅವರ ಕಿರಿಯ ಪುತ್ರ ಬಿನೀಶ್‌ನನ್ನು ಇತ್ತೀಚೆ ಬೆಂಗಳೂರಿನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಬುಧವಾರದಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಿತ್ತು. ಹೀಗಾಗಿ ಬಿನೀಶ್‌ ಜೈಲು ಪಾಲಾಗಿದ್ದರು. ಈ ವಿಷಯ ಕೇರಳ ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೆ.ಬಾಲಕೃಷ್ಣನ್‌ ಅವರ ರಾಜೀನಾಮೆಗೂ ವಿಪಕ್ಷಗಳು ಒತ್ತಾಯಿಸಿದ್ದವು.

ಇನ್ನು ಹಿರಿಯ ಪುತ್ರ ಬಿನಯ್‌ ವಿರುದ್ಧ ಯುಎಇನಲ್ಲಿ ಬಾರ್‌ ಡ್ಯಾನ್ಸರ್‌ ಆಗಿದ್ದ ಮುಂಬೈ ಮೂಲದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ಬಿನಯ್‌ ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಅವರು ನನಗೆ ವಂಚಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು. ಈ ಕೇಸಿನ ಕುರಿತು ನ್ಯಾಯಾಲಯ ಡಿಎನ್‌ಎ ಪರೀಕ್ಷೆಗೆ ಆದೇಶಿಸಿತ್ತಾದರೂ, ಅದರ ಫಲಿತಾಂಶ ಎರಡು ವರ್ಷದಿಂದ ಬಾಕಿ ಉಳಿದಿದೆ.

ಇದಲ್ಲದೆ ದುಬೈ ಮೂಲದ ಕಂಪನಿಯೊಂದಕ್ಕೆ 13 ಕೋಟಿ ರು. ವಂಚಿಸಿದ ಪ್ರಕರಣದಲ್ಲಿ ದುಬೈ ಸರ್ಕಾರ ಬಿನಯ್‌ಗೆ ಪ್ರಯಾಣ ನಿರ್ಬಂಧ ಹೇರಿತ್ತು. ಬಳಿಕ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲಾಯಿತಾದರೂ, ಇತ್ಯರ್ಥಕ್ಕೆ ಬಳಸಿದ ಹಣದ ಮೂಲ ನಿಗೂಢವಾಗಿಯೇ ಉಳಿದಿತ್ತು.