ಗ್ರಾಮಗಳಿಗೆ ಸೋಂಕು ಹಬ್ಬದಂತೆ ನೋಡಿಕೊಳ್ಳಿ| ಪಂಚಾಯ್ತಿಗಳು ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಬೇಕು| ಗ್ರಾಮಗಳ ಪ್ರತಿ ವ್ಯಕ್ತಿಗೂ ಲಸಿಕೆ ಕೊಡಿಸಬೇಕು| ಈ ವರ್ಷ ಕಳೆದ ವರ್ಷಕ್ಕಿಂತ ದೊಡ್ಡ ಸವಾಲು| ‘ಸ್ವಾಮಿತ್ವ’ಕ್ಕೆ ಚಾಲನೆ ನೀಡಿ ಪ್ರಧಾನಿ ಮೋದಿ ಕರೆ
ನವದೆಹಲಿ(ಏ.25): ದೇಶದ ಮುಂದೆ ಕಳೆದ ವರ್ಷಕ್ಕಿಂತ ಬಹುದೊಡ್ಡ ‘ಕೊರೋನಾ ಸವಾಲು’ ಎದುರಾಗಿದೆ. ಈ ವ್ಯಾಧಿಯು ಗ್ರಾಮಗಳಲ್ಲಿ ಹರಡುವುದನ್ನು ಶತಾಯ ಗತಾಯ ತಪ್ಪಿಸಬೇಕು. ಗ್ರಾಮೀಣರೆಲ್ಲರೂ ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
‘ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’ ಅಂಗವಾಗಿ ಶನಿವಾರ ‘ಸ್ವಾಮಿತ್ವ’ (ಆಸ್ತಿ ಹಕ್ಕುಪತ್ರ) ಯೋಜನೆಯ ಅಡಿ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆಗೆ ವರ್ಚುವಲ್ ಆಗಿ ಚಾಲನೆ ನೀಡಿ ಅವರು ಮಾತನಾಡಿದರು.
‘ಗ್ರಾಮಗಳ ಮುಖ್ಯಸ್ಥರು ಕೊರೋನಾ ವಿರುದ್ಧ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಕೊರೋನಾ ವಿರುದ್ಧ ಯಾರಾದರೂ ಮೊತ್ತಮೊದಲು ಜಯ ಸಾಧಿಸಲಿದ್ದಾರೆ ಎಂದರೆ ಅವು ಭಾರತದ ಗ್ರಾಮಗಳಾಗಲಿವೆ. ಗ್ರಾಮಗಳ ಜನರು ವಿಶ್ವಕ್ಕೇ ದಾರಿ ತೋರಿಸಲಿದ್ದಾರೆ’ ಎಂದು ಭಾವುಕರಾಗಿ ನುಡಿದರು.
‘ಕಳೆದ ವರ್ಷ ಗ್ರಾಮಗಳನ್ನು ಕೊರೋನಾ ಮುಟ್ಟಿರಲಿಲ್ಲ. ಈ ಸಲ ಕೂಡ ಗ್ರಾಮ ಪಂಚಾಯ್ತಿಗಳು ಇದೇ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಈಗ ಲಸಿಕೆಯ ರಕ್ಷಾಕವಚ ಬಮದಿದೆ. ಎಲ್ಲ ಗ್ರಾಮಸ್ಥರಿಗೂ ಲಸಿಕೆ ನೀಡುವಂತೆ ನೋಡಿಕೊಳ್ಳಬೇಕು. ‘ಲಸಿಕೆ ಹಾಗೂ ಕಠಿಣ ಮುಂಜಾಗ್ರತಾ ಕ್ರಮ’ಗಳು ಲ್ಲರ ಮಂತ್ರವಾಗಬೇಕು’ ಎಂದು ಮನವಿ ಮಾಡಿದರು.
ಈ ಕಠಿಣ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಪ್ರತಿ ಬಡಜನರಿಗೂ ಮೇ ಹಾಗೂ ಜೂನ್‌ನಲ್ಲಿ ಉಚಿತ ರೇಶನ್ ನೀಡುತ್ತಿದ್ದೇವೆ. ಇದರಿಂದ 80 ಕೋಟಿ ಜನರಿಗೆ ಪ್ರಯೋಜನ ಲಭಿಸಲಿದೆ ಎಂದರು.
ಸ್ವಾಮಿತ್ವದಿಂದ 4 ಲಕ್ಷ ಭೂಮಾಲೀಕರಿಗೆ ಆಸ್ತಿಪತ್ರ
ನವದೆಹಲಿ: ‘ಸ್ವಾಮಿತ್ವ’ (ಆಸ್ತಿ ಹಕ್ಕುಪತ್ರ) ಯೋಜನೆಯಡಿ 4.09 ಲಕ್ಷ ಭೂಮಾಲೀಕರಿಗೆ ಇ-ಆಸ್ತಿಪತ್ರ ಲಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದರಿಂದಾಗಿ ಆಸ್ತಿ ಹೊಂದಿದ್ದರೂ ಹಕ್ಕುಪತ್ರ ಇಲ್ಲದವರಿಗೆ ಪ್ರಯೋಜನವಾಗಲಿದೆ ಎಂದು ಅವರು, ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಿ ತಿಳಿಸಿದರು.
ಏನಿದು ಸ್ವಾಮಿತ್ವ?:
ಬ್ರಿಟಿಷರು ಆಳುವಾಗ ದೇಶದಲ್ಲಿನ ಕೃಷಿ ಜಮೀನಿನ ದಾಖಲೆ ಮಾತ್ರ ಸೃಷ್ಟಿಸಿದ್ದರು. ಗ್ರಾಮೀಣರ ಮನೆ ಹಾಗೂ ಊರಿನ ಆಸ್ತಿಯ ದಾಖಲೆ ಸೃಷ್ಟಿಸಿರಲಿಲ್ಲ. ಈಗಲೂ ಇದೇ ಸ್ಥಿತಿ ಇದ್ದು, ಭೂದಾಖಲೆಗಳಿಲ್ಲದೇ ಅನೇಕ ಗ್ರಾಮೀಣರು ಪರದಾಡುತ್ತಿದ್ದಾರೆ. ಅವರಿಗೆ ಆಸ್ತಿಪತ್ರ ನೀಡಲೆಂದೇ ಆಸ್ತಿಪತ್ರ ನೀಡಲಾಗುತ್ತಿದೆ. ಡ್ರೋನ್ ಸರ್ವೇ ಮೂಲಕ ಆಸ್ತಿ ಮಾಲೀಕರನ್ನು ಗುರುತಿಸಲಾಗುತ್ತದೆ. ನೈಜ ಮಾಲೀಕರಿಗೆ ಮೊಬೈಲ್‌ನಲ್ಲಿ ಲಿಂಕ್ ಕಳಿಸಲಾಗುತ್ತದೆ. ಆ ಲಿಂಕ್ ಕ್ಲಿಕ್ಕಿಸಿ ಇ-ಆಸ್ತಿಪತ್ರವನ್ನು ಮಾಲೀಕರು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಂತರ ಭೂದಾಖಲೆ ಕಚೇರಿಗೆ ಹೋಗಿ ಮೂಲ ಆಸ್ತಿಪತ್ರ ಪಡೆಯಬಹುದು.
ಕರ್ನಾಟಕ ಸೇರಿ 8 ರಜ್ತಗಳಲ್ಲಿ ಪ್ರಾಯೋಗಿಕವಾಗಿ ಕಳೆದ ವರ್ಷ ಇದನ್ನು ಜಾರಿಗೆ ತರಲಾಗಿತ್ತು. 6.62 ಲಕ್ಷ ಹಳ್ಳಿಗಳಿಗೆ ಮುಂದಿನ 5 ವರ್ಷದಲ್ಲಿ ಸ್ವಾಮಿತ್ವದ ಪ್ರಯೋಜನ ಲಭಿಸಲಿದೆ.
