ನವದೆಹಲಿ(ಫೆ.05): ಕೊರೋನಾ ಲಸಿಕೆಯ ಮೊದಲ ಡೋಸ್‌ ಪಡೆದ ಆರೋಗ್ಯ ಕಾರ್ಯಕರ್ತರಿಗೆ ಫೆ.13ರಿಂದಲೇ 2ನೇ ಡೋಸ್‌ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ ಈಗಾಗಲೇ ಶೇ.45ರಷ್ಟುಮಂದಿಗೆ ಲಸಿಕೆ ನೀಡಿರುವುದಾಗಿ ಸರ್ಕಾರ ಹೇಳಿಕೊಂಡಿದೆ.

ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ‘ಗುರುವಾರ ಮಧ್ಯಾಹ್ನ 1.30ರವರೆಗೆ ಒಟ್ಟಾರೆ 45.94 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಜ.16ರಿಂದ ಮೊದಲ ಡೋಸ್‌ ಲಸಿಕೆ ವಿತರಣೆ ಆರಂಭವಾಗಿತ್ತು.

ದೀರ್ಘಕಾಲದವರೆಗೆ ಲಸಿಕೆ ವಿತರಣೆಗೆ ಯುನಿಸೆಫ್‌ ನೊಂದಿಗೆ ಸೀರಂ ಒಪ್ಪಂದ

ಕೋವಿಶೀಲ್ಡ್‌ ಮತ್ತು ನೋವಾವ್ಯಾಕ್ಸ್‌ ಕೋವಿಡ್‌ ಲಸಿಕೆಗಳ ದೀರ್ಘಕಾಲಿಕ ವಿತರಣೆಗೆ ಪುಣೆಯ ಸೀರಂ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್‌)ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸುಮಾರು 100 ದೇಶಗಳಿಗೆ 1.1ಬಿಲಿಯನ್‌ ಡೋಸ್‌ ಲಸಿಕೆಯನ್ನು ಸೀರಂ ಪೂರೈಸಬಹುದಾಗಿದೆ.

ವಿಶ್ವದ ಅತಿ ದೊಡ್ಡ ಔಷಧ ತಯಾರಿಕಾ ದೇಶವಾಗಿ ಮಾರ್ಪಟ್ಟಿರುವ ಭಾರತವು ಈಗಾಗಲೇ ಹಲವು ರಾಷ್ಟ್ರಗಳಿಗೆ ತನ್ನ ಲಸಿಕೆಗಳನ್ನು ಪೂರೈಸುತ್ತಿದೆ. ಪುಣೆಯ ಸೀರಂ ಆಕ್ಸ್‌ಫರ್ಡ್‌ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಮತ್ತು ಅಮೆರಿಕದ ನೋವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ನೋವಾವ್ಯಾಕ್ಸ್‌ ಲಸಿಕೆಯನ್ನು ಉತ್ಪಾದಿಸುತ್ತಿದೆ.