ತಿರುವನಂತಪುರಂ(ನ.13): ಹೊರ ರಾಜ್ಯಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರು ಒಂದು ವೇಳೆ ತಮ್ಮ ಯಾತ್ರೆಯ ಮಧ್ಯೆ ಕೊರೋನಾಕ್ಕೆ ತುತ್ತಾದರೆ, ಕೇರಳ ಸರ್ಕಾರದಿಂದ ಉಚಿತ ಚಿಕಿತ್ಸೆ ಸೌಲಭ್ಯ ಇರುವುದಿಲ್ಲ. ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮೆಯನ್ನು ಹೊಂದಿಲ್ಲದಿದ್ದರೆ ಕೊರೋನಾ ಚಿಕಿತ್ಸಾ ವೆಚ್ಚವನ್ನು ಹೊರ ರಾಜ್ಯದ ಯಾತ್ರಿಕರೇ ಭರಿಸಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕೊರೋನಾ ಸೋಂಕಿಗೆ ತುತ್ತಾಗುವ ಯಾತ್ರಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಆದರೆ, ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ. ಆದರೆ, ತಕ್ಷಣ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಯಾತ್ರಿಕರ ಸುರಕ್ಷತೆ, ಆಸ್ಪತ್ರೆ, ಆ್ಯಂಬುಲೆನ್ಸ್‌ಗಳ ಲಭ್ಯತೆಗೆ ಸಂಬಂಧಿಸಿದಂತೆ ವಿಸ್ತೃತ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದ್ದು, ಯಾತ್ರಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.