ನವದೆಹಲಿ(ಏ.12): ಭಾನುವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆಯಾದ 10,732 ಮಂದಿಗೆ ಸೋಂಕು ವ್ಯಾಪಿಸುವುದರೊಂದಿಗೆ ದೆಹಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೇಶದ ಜನತೆ ಅನಿವಾರ್ಯತೆ ಕಾರಣಕ್ಕೆ ಹೊರತುಪಡಿಸಿ ಇನ್ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್‌, ‘ಈ ಹಿಂದಿನ ಕೊರೋನಾ ಅಲೆಗಿಂತಲೂ ದಿಲ್ಲಿಯಲ್ಲಿ ಕಂಡುಬಂದಿರುವ 4ನೇ ಅಲೆಯು ಭಾರೀ ಅಪಾಯಕಾರಿಯಾಗಿದ್ದು, ಪರಿಸ್ಥಿತಿ ಬಗ್ಗೆ ಸರ್ಕಾರ ಕಣ್ಗಾವಲು ವಹಿಸುತ್ತಿದೆ. ಇದರ ಜೊತೆಗೆ ನೀವು (ಜನ) ಸಹಕಾರ ನೀಡಿದರೆ, ಲಾಕ್‌ಡೌನ್‌ ವಿಧಿಸದೇ ಪರಿಸ್ಥಿತಿಯನ್ನು ನಿಭಾಯಿಸಬಹುದು’ ಎಂದಿದ್ದಾರೆ.

ಆದರೆ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಬೆಡ್‌ಗಳ ಕೊರತೆಯಾದರೆ, ಲಾಕ್‌ಡೌನ್‌ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.