ಸೋಂಕಿತ ಮಹಿಳೆ ಮಕ್ಕಳಿಗೆ ಎದೆ ಹಾಲು ಕುಡಿಸಬಹುದು!
* ಗರ್ಭಿಣಿ ಮಹಿಳೆ ತಾನಿರುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಬೇಕು
* ಸೋಂಕಿತ ಮಹಿಳೆ ಮಕ್ಕಳಿಗೆ ಎದೆ ಹಾಲು ಕುಡಿಸಬಹುದು
* ಹಾಲುಣಿಸಲು ಬರುವ ಮುನ್ನ ಮಾಸ್ಕ್ ಧರಿಸಿ, ಶುಚಿತ್ವ ಕಾಯ್ದುಕೊಳ್ಳಿ
ನವದೆಹಲಿ(ಜು.27): ಕೊರೋನಾ ಸೋಂಕಿತೆಯಾದ ಹೊರತಾಗಿಯೂ, ಮಹಿಳೆಯರು ತಮ್ಮ ಮಕ್ಕಳಿಗೆ ಎದೆ ಹಾಲನ್ನೇ ಉಣಿಸಬೇಕು. ಉಳಿದ ಸಂದರ್ಭಗಳಲ್ಲಿ ಮಗುವಿನಿಂದ 6 ಅಡಿಗಳ ಅಂತರ ಕಾಯ್ದುಕೊಳ್ಳುವಂತೆ ಹಿರಿಯ ವೈದ್ಯರೊಬ್ಬರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಡಾ. ಮಂಜು ಪುರಿ, ‘ತಾಯಿಯಿಂದ ಹಸುಗೂಸುಗಳಿಗೆ ಕೋವಿಡ್ ಹಬ್ಬಲಿದೆ ಎಂಬುದು ಈವರೆಗೆ ಖಚಿತವಾಗಿಲ್ಲ. ಆದಾಗ್ಯೂ, ಸೋಂಕಿತ ಗರ್ಭಿಣಿಯು ತಾನು ಜನ್ಮ ನೀಡುವ ಮಗುವಿಗೆ ತನ್ನಿಂದ ಕೊರೋನಾ ವೈರಸ್ ಹರಡದಂತೆ ಎಲ್ಲಾ ಮುಂಜಾಗ್ರತೆಗಳನ್ನು ವಹಿಸಬೇಕು. ಎದೆ ಹಾಲು ಉಣಿಸಲು ಬರುವ ಮುನ್ನ ತಾಯಿಯು ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು, ಮುಖಕ್ಕೆ ಮುಖಗವಸು ಅಥವಾ ಫೇಸ್‌ಶೀಲ್ಡ್‌ಗಳನ್ನು ಧರಿಸಿರಬೇಕು. ಜೊತೆಗೆ ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ್ಗೆ ಸ್ಯಾನಿಟೈಸ್ ಮಾಡಬೇಕು’ ಎಂದು ಹೇಳಿದ್ದಾರೆ.
ಕೋವಿಡ್ ಪಾಸಿಟಿವಿಟಿ ದರ ಶೇ.3.41ಕ್ಕೆ ಏರಿಕೆ
ಸೋಮವಾರ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 39,361 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಇದೇ ಅವಧಿಯಲ್ಲಿ 416 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಆದರೆ, 35 ದಿನಗಳ ಬಳಿಕ ದೈನಂದಿನ ಪಾಸಿಟಿವಿಟಿ ದರ ಶೇ.3ಕ್ಕಿಂತ ಹೆಚ್ಚು (3.41%) ದಾಖಲಾಗಿದೆ. ಇದೇ ವೇಳೆ, ಸಕ್ರಿಯ ಸೋಂಕಿತರ ಸಂಖ್ಯೆ 4.08 ಲಕ್ಷದಿಂದ 4.11 ಲಕ್ಷಕ್ಕೆ ಹೆಚ್ಚಳವಾಗಿದೆ. 3ನೇ ಅಲೆ ಏಳಬಹುದು ಎಂದು ತಜ್ಞರು ಹೇಳುತ್ತಿರುವ ನಡುವೆಯೇ ಪಾಸಿಟಿವಿಟಿ ದರ ಹಾಗೂ ಸಕ್ರಿಯ ಪ್ರಕರಣಗಳು ಏರಿಕೆ ಆಗಿರುವುದು ಎಚ್ಚರಿಕೆ ಗಂಟೆ.