ಮೇ 10ರ ವೇಳೆಗೆ ನಿತ್ಯ ದೇಶದಲ್ಲಿ 5600 ಬಲಿ!| ಏ.12ರಿಂದ ಆ.1ರ ನಡುವೆ 3.29 ಲಕ್ಷ ಸಾವು ಸಂಭವ| ಅಮೆರಿಕದ ವಾಷಿಂಗ್ಟನ್ ವಿವಿ ತಜ್ಞರ ಅಧ್ಯಯನ ವರದಿ| ಮೇ 15ರ ವೇಳೆಗೆ ನಿತ್ಯ 10 ಲಕ್ಷ ಕೇಸ್ ಸಾಧ್ಯತೆ
ನವದೆಹಲಿ(ಏ.25): ಕೊರೋನಾ ಎರಡನೇ ಅಲೆಯು ತೀವ್ರ ಆತಂಕ ಉಂಟು ಮಾಡಿರುವ ನಡುವೆಯೇ, ‘ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಮೇ 10ರ ವೇಳೆಗೆ ಭಾರತದಲ್ಲಿ ನಿತ್ಯ 5600 ಸಾವು ಸಂಭವಿಸಲಿದ್ದು, ಆ ವೇಳೆಗೆ ಸಾವಿನ ಸಂಖ್ಯೆ ಪರಾಕಾಷ್ಠೆ ತಲುಪಲಿದೆ’ ಎಂದು ಅಮೆರಿಕದ ಅಧ್ಯಯನವೊಂದು ಹೇಳಿದೆ.
‘ಕೋವಿಡ್-19 ಮುನ್ಸೂಚನೆ’ ಎಂಬ ಹೆಸರಿನ ಅಧ್ಯಯನವನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ತಜ್ಞರು ನಡೆಸಿದ್ದಾರೆ. ಲಸಿಕೆ ನೀಡಿಕೆಯನ್ನು ಭಾರತ ದೇಶಾದ್ಯಂತ ತೀವ್ರಗೊಳಿಸಿ ಈ ಅಲೆಯನ್ನು ನಿಯಂತ್ರಿಸಬೇಕು. ಲಸಿಕೆ ನೀಡಿದರೆ 85 ಸಾವಿರ ಜೀವಗಳನ್ನು ಉಳಿಸಬಹುದು ಎಂಬ ಸಲಹೆಯನ್ನೂ ಅದು ನೀಡಿದೆ. ಜೊತೆಗೆ ಏಪ್ರಿಲ್ ಅಂತ್ಯದ ವೇಳೆಗೆ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸುವಂತೆ ಮಾಡಿದರೆ 70000 ಜನರ ಜೀವ ಉಳಿಸಬಹುದು ಎಂದೂ ವರದಿ ಹೇಳಿದೆ.
"
ಮೇ 10ರ ವೇಳೆಗೆ ಭಾರತದಲ್ಲಿ 5,600 ಸಾವು ಸಂಭವಿಸಿ ಸಾವಿನ ಸಂಖ್ಯೆಯ ಗರಿಷ್ಠ ತಲುಪಲಿದೆ. ಇದರ ನಡುವೆ, ಏಪ್ರಿಲ್ 12ರಿಂದ ಆಗಸ್ಟ್ 1ರ ನಡುವೆ 3.29 ಲಕ್ಷ ಸಾವು ಸಂಭವಿಸಲಿದ್ದು, ಜುಲೈ ಅಂತ್ಯದ ವರೆಗೆ ಒಟ್ಟು ಸಾವಿನ ಸಂಖ್ಯೆ 6.65 ಲಕ್ಷ ತಲುಪಬಹುದು ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ನಿತ್ಯ 8-10 ಲಕ್ಷ ಕೇಸ್:
ಇದೇ ವೇಳೆ ಮಿಚಿಗನ್ ವಿವಿಯ ವಿಜ್ಞಾನಿ ಡಾ. ಭ್ರಮರ್ ಮುಖರ್ಜಿ ಅವರ ನೇತೃತ್ವದ ತಂಡ ಬಿಡುಗಡೆ ಮಾಡಿರುವ ಮತ್ತೊಂದು ವರದಿ ಅನ್ವಯ, ಮೇ ಮಧ್ಯಭಾಗದ ವೇಳೆಗೆ ಭಾರತದಲ್ಲಿ ನಿತ್ಯ 8-10 ಲಕ್ಷ ಹೊಸ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಜೊತೆಗೆ ನಿತ್ಯ 4500 ಜನರು ಸೋಂಕಿಗೆ ಬಲಿಯಾಗಬಹುದು ಎಂದು ಅವರು ಹೇಳಿದ್ದಾರೆ.
ವರದಿಯಲ್ಲೇನಿದೆ?
- ಮೇ 10ರ ವೇಳೆಗೆ ಕೋವಿಡ್ ಸಾವು ಪರಾಕಾಷ್ಠೆಗೆ
- ಲಸಿಕೆ ಹೆಚ್ಚಿಸಿದರೆ ಮಾತ್ರ 2ನೇ ಅಲೆ ನಿಯಂತ್ರಣಕ್ಕೆ
- ಲಸಿಕೆಯಿಂದ 85 ಸಾವಿರ ಜನರ ಜೀವ ಉಳಿಸಬಹುದು
- ಕಡ್ಡಾಯ ಮಾಸ್ಕ್ ಧಾರಣೆಯಿಂದ 70000 ಜನರ ರಕ್ಷಿಸಬಹುದು
- ಜುಲೈ ಅಂತ್ಯದ ವೇಳೆಗೆ ದೇಶದ ಒಟ್ಟು ಸಾವು 6.65 ಲಕ್ಷಕ್ಕೇರಿಕೆ
- ಹಲವು ದೇಶಗಳಲ್ಲಿ ಕೇಸು, ಸಾವು ಮುಚ್ಚಿಡಲಾಗುತ್ತಿದೆ
- ಈ ಪ್ರಮಾಣ ಶೇ.10ರಿಂದ ಶೇ.20ರವರೆಗೂ ಇದೆ
