ನವದೆಹಲಿ (ಏ.04):  ಶನಿವಾರ ದೇಶಾದ್ಯಂತ 89,129 ಮಂದಿಗೆ ಕೊರೋನಾ ಸೋಂಕು ತಗಲಿದ್ದು, ಇದು ಆರೂವರೆ ತಿಂಗಳಲ್ಲೇ ಏಕದಿನದಲ್ಲಿ ದಾಖಲಾದ ಅತಿಹೆಚ್ಚಿನ ಸಂಖ್ಯೆಯಾಗಿದೆ. ಒಂದೇ ದಿನ 714 ಮಂದಿ ಸಾವನ್ನಪ್ಪಿದ್ದಾರೆ. ಅದರೊಂದಿಗೆ ದೇಶದಲ್ಲಿ ಕೊರೋನಾಕ್ಕೆ ಈವರೆಗೆ ಬಲಿಯಾದವರ ಸಂಖ್ಯೆ 1.64 ಲಕ್ಷಕ್ಕೆ ಏರಿಕೆಯಾಗಿದೆ. ಶನಿವಾರದ ಸಾವು ಅಕ್ಟೋಬರ್‌ 21ರ ನಂತರದ ಗರಿಷ್ಠವಾಗಿದೆ.

ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ದೇಶದಲ್ಲಿ ಕಳೆದ 24 ದಿನಗಳಿಂದ ಕೊರೋನಾ ಸೋಂಕು ನಿತ್ಯ ಏರಿಕೆಯಾಗುತ್ತಿದೆ. ಈ ಅವಧಿಯಲ್ಲಿ 6.58 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುಣಮುಖ ದರ ಶೇ.93.36ಕ್ಕೆ ಕುಸಿತವಾಗಿದೆ. ಸಾವಿನ ದರ ಕೂಡ ಶೇ.1.32ಕ್ಕೆ ಕುಸಿತವಾಗಿದೆ ಎಂದು ಮಾಹಿತಿ ನೀಡಿದೆ.

ಕೊರೋನಾ ಕಾಟ: ಬೆಂಗ್ಳೂರಲ್ಲಿ ಸತತ 2ನೇ ದಿನವೂ 3000+ ಕೇಸ್‌..! ...

8 ರಾಜ್ಯಗಳಲ್ಲಿ ಶೇ.81.4 ಕೇಸು :  ಶನಿವಾರ ದೇಶಾದ್ಯಂತ ಪತ್ತೆಯಾದ 89 ಸಾವಿರ ಕೊರೋನಾ ಪ್ರಕರಣಗಳ ಪೈಕಿ ಶೇ.81.42ರಷ್ಟುಪ್ರಕರಣಗಳು ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಪಂಜಾಬ್‌ ಹಾಗೂ ಮಧ್ಯಪ್ರದೇಶ ಈ 8 ರಾಜ್ಯಗಳಲ್ಲಿ ವರದಿಯಾಗಿವೆ. ದೇಶದಲ್ಲೀಗ ಅತಿಹೆಚ್ಚು ಕೊರೋನಾ ಸೋಂಕು ವರದಿಯಾಗುತ್ತಿರುವ 10 ಜಿಲ್ಲೆಗಳೆಂದರೆ ಪುಣೆ, ಮುಂಬೈ, ನಾಗ್ಪುರ, ಥಾಣೆ, ನಾಶಿಕ್‌, ಬೆಂಗಳೂರು ನಗರ, ಔರಂಗಾಬಾದ್‌, ದೆಹಲಿ, ಅಹ್ಮದ್‌ನಗರ ಹಾಗೂ ನಾಂದೇಡ್‌ ಆಗಿವೆ. ಈ ಹತ್ತು ಜಿಲ್ಲೆಗಳಲ್ಲಿ ದೇಶದಲ್ಲಿರುವ ಒಟ್ಟು ಕೊರೋನಾ ಸೋಂಕಿತರ ಪೈಕಿ ಶೇ.50ರಷ್ಟುಸೋಂಕಿತರಿದ್ದಾರೆ.

ಇನ್ನು, ದೇಶದಲ್ಲಿರುವ ಒಟ್ಟು ಸೋಂಕಿತರ ಪೈಕಿ ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ, ಕೇರಳ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಶೇ.77.3ರಷ್ಟುಸೋಂಕಿತರಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ ದೇಶದ ಒಟ್ಟು ಸೋಂಕಿತರ ಪೈಕಿ ಶೇ.59.36ರಷ್ಟುಸೋಂಕಿತರಿದ್ದಾರೆ.