ನವದೆಹಲಿ(ಮಾ.24): ದೇಶದಲ್ಲಿ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ 504 ದಿನಗಳಿಂದ ಕೇವಲ 202 ದಿನಗಳಿಗೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಂದರೆ ಸೋಂಕು ದ್ವಿಗುಣ ಪ್ರಮಾಣ ಶರವೇಗದಲ್ಲಿ ಹೆಚ್ಚುತ್ತಿದೆ.

ಮಾ.1ರ ಅಂಕಿ ಸಂಖ್ಯೆಗಳ ಅನ್ವಯ ದೇಶದಲ್ಲಿ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ 504.4 ದಿನಗಳಾಗಿತ್ತು. ಮಾ.23ರ ವೇಳೆಗೆ ಅದು 202.3 ದಿನಗಳಿಗೆ ಇಳಿದಿದೆ. ಅಂದರೆ ಈ ಮುನ್ನ 504 ದಿನಕ್ಕೊಮ್ಮೆ ದ್ವಿಗುಣಗೊಳ್ಳುತ್ತಿದ್ದ ಸೋಂಕು ಈಗ ಕೇವಲ 202 ದಿವಸದಲ್ಲಿ ದುಪ್ಪಟ್ಟಾಗುತ್ತದೆ.

ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವುದೇ ಇದಕ್ಕೆ ಕಾರಣ. ಒಟ್ಟಾರೆ ಹೊಸ ಸೋಂಕಿನಲ್ಲಿ ಈ 6 ರಾಜ್ಯಗಳ ಪಾಲೇ ಶೇ.80.90ರಷ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಮಂಗಳವಾರ ಬೆಳಗ್ಗೆ 8ಕ್ಕೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ 40715 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಶೇ.80.90ರಷ್ಟುಪಾಲು ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ, ಗುಜರಾತ್‌, ಛತ್ತೀಸ್‌ಗಢ ಮತ್ತು ತಮಿಳುನಾಡು ರಾಜ್ಯಗಳದ್ದೇ ಆಗಿದೆ.

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 199 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 6 ರಾಜ್ಯಗಳ ಪಾಲು ಶೇ.80.4ರಷ್ಟಿದೆ. 14 ರಾಜ್ಯಗಳಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೇ ಸಾವು ದಾಖಲಾಗಿಲ್ಲ.

ಇದೇ ವೇಳೆ ಸಕ್ರಿಯ ಸೋಂಕಿತರ ಸಂಖ್ಯೆ 3.45ಕ್ಕೆ ಏರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ 10731ರಷ್ಟುಹೆಚ್ಚಳವಾಗಿದೆ. ಸಕ್ರಿಯ ಕೇಸಲ್ಲಿ ಶೇ.75.15ರಷ್ಟುಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್‌ಗೆ ಸೇರಿದೆ. ಈ ಪೈಕಿ ಮಹಾರಾಷ್ಟ್ರವೊಂದರ ಪಾಲೇ ಶೇ.62.71ರಷ್ಟಿದೆ ಎಂದು ಸಚಿವಾಲಯ ಹೇಳಿದೆ.