ನವದೆಹಲಿ(ಡಿ.14): ಹಬ್ಬದ ಋತು ಮುಗಿದ ಬಳಿಕ ಹಾಗೂ ಚಳಿಗಾಲದ ವೇಳೆ ದೇಶದಲ್ಲಿ ಕೊರೋನಾ 2ನೇ ಅಲೆ ಸೃಷ್ಟಿ ಆಗುವ ಆಂತಂಕದ ಮಧ್ಯೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ 50 ಸಾವಿರ ಗಡಿ ದಾಟಿದೆ. ಭಾನುವಾರ 51,788 ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 98.83 ಲಕ್ಷಕ್ಕೆ ಏರಿಕೆ ಆಗಿದೆ.

ನ.25ರಂದು 50,118 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಕೊರೋನಾ ವೈರಸ್ ಪ್ರಕರಣಗಳು ಇಳಿಕೆ ಕಂಡು 26 ಸಾವಿರಕ್ಕೆ ಕುಸಿದಿತ್ತು. 17 ದಿನಗಳ ಬಳಿಕ ಮತ್ತೊಮ್ಮೆ 50 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಒಂದು ವೇಳೆ ಸೋಂಕಿನ ಸಂಖ್ಯೆ ಇದೇ ಗತಿಯಲ್ಲಿ ಏರಿಕೆಯಾದರೆ ಇನ್ನೆರಡು ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 1 ಕೋಟಿ ತಲುಪುವ ಸಾಧ್ಯತೆ ಇದೆ.

ಇದೇ ವೇಳೆ ಒಂದೇ ದಿನ 323 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1.43 ಲಕ್ಷಕ್ಕೆ ಏರಿಕೆ ಆಗಿದೆ. ಇದೇ ವೇಳೆ ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 93.86 ಲಕ್ಷಕ್ಕೆ ಏರಿಕೆ ಆಗಿದೆ. ಇದೇ ವೇಳೆ ರೈತರ ಪ್ರತಿಭನಟನೆ ನಡೆಯುತ್ತಿರುವ ದೆಹಲಿಯಲ್ಲಿ 1,984 ಹೊಸ ಪ್ರಕರಣಗಳು ದಾಖಲಾಗಿವೆ.