ನವದೆಹಲಿ(ಫೆ.28): ಸೋಮವಾರದಿಂದ ಆರಂಭವಾಗುವ 2ನೇ ಹಂತದ ಕೊರೋನಾ ಲಸಿಕಾ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಲಸಿಕೆಗೆ ಗರಿಷ್ಠ 500 ರು. ಶುಲ್ಕ ನಿಗದಿಪಡಿಸಲಾಗಿದೆ. ಸದ್ಯ ದೇಶದಲ್ಲಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಯನ್ನು 2 ಡೋಸ್‌ನಂತೆ ನೀಡಲಾಗುತ್ತಿದೆ. ಅದರಂತೆ ಪ್ರತಿ ಡೋಸ್‌ಗೆ ಗರಿಷ್ಠ 150 ರು. ಶುಲ್ಕ ಮತ್ತು ಲಸಿಕೆ ನೀಡಲು ಆಸ್ಪತ್ರೆಗಳು ಗರಿಷ್ಠ 100 ರು. ಶುಲ್ಕ ಪಡೆಯಬಹುದು ಎಂದು ಸರ್ಕಾರ ನಿಗದಿ ಮಾಡಿದೆ. ಅದರಂತೆ 2 ಡೋಸ್‌ಗೆ ಗರಿಷ್ಠ 500 ರು. ಶುಲ್ಕ ನಿಗದಿ ಮಾಡಲಾಗಿದೆ.

ಮಾ.1ರಿಂದ ಆರಂಭವಾಗಲಿರುವ ಲಸಿಕಾ ಅಭಿಯಾನದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿಯೇ ಲಭ್ಯವಿರಲಿದೆ. ಆದರೆ ಲಸಿಕೆ ನೀಡಿಕೆ ಗತಿ ಹೆಚ್ಚಿಸುವ ನಿಟ್ಟಿನಲ್ಲಿ 20000ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳ ನೆರವನ್ನೂ ಪಡೆಯಲು ಸರ್ಕಾರ ಉದ್ದೇಶಿಸಿದೆ. ಹೀಗಾಗಿ ಇಂಥ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರು 2 ಡೋಸ್‌ಗೆ 500 ರು. ಶುಲ್ಕ ನೀಡಿ ಸೇವೆ ಪಡೆಯುಬಹುದು.

ಲಸಿಕೆ ಪಡೆಯುವುದು ಹೇಗೆ?

ಕೋ ವಿನ್‌ ಆ್ಯಪ್‌, ಆರೋಗ್ಯ ಸೇತು ಆ್ಯಪ್‌ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು. ಅದರಲ್ಲಿ ಸುತ್ತಮುತ್ತಲಿನ ಯಾವ್ಯಾವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ ಎಂಬ ವಿವರ ಇರುತ್ತದೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಆಗದೇ ಇರುವವರು ಅಥವಾ ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದೇ ಇರುವವರು, ನೇರವಾಗಿ ಆಸ್ಪತ್ರೆಗೆ ತೆರಳಿ ಅಲ್ಲಿಯೇ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಏನೇನು ದಾಖಲೆ ನೀಡಬೇಕು?

ಲಸಿಕೆ ಪಡೆಯುವವರು ಆಧಾರ್‌, ಫೋಟೋ ಇರುವ ಮತದಾರರ ಗುರುತಿನ ಚೀಟಿ, ಹೆಸರು ನೋಂದಣಿ ವೇಳೆ ನೀಡಲಾದ ಫೋಟೋ ಸಹಿತ ಗುರುತಿನ ಚೀಟಿಗಳ ಪೈಕಿ ಯಾವುದಾದರೂ ಒಂದನ್ನು ಲಸಿಕೆ ಪಡೆಯುವ ವೇಳೆ ಕಡ್ಡಾಯ ತರಬೇಕು.

ಆನಾರೋಗ್ಯ ಪೀಡಿತರು

ವಿವಿಧ ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರು, ನೊಂದಾಯಿತ ವೈದ್ಯರ ಸಹಿ ಇರುವ ಪ್ರಮಾಣ ಪತ್ರ ತರಬೇಕು.