ಬೆಂಗಳೂರು(ಏ.24): ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸಲು ಜಾರಿಗೆ ತಂದಿರುವ ವಾರಾಂತ್ಯ ಕಫä್ರ್ಯ ಶುಕ್ರವಾರ ರಾತ್ರಿ 9 ಗಂಟೆಯಿಂದ ಅನುಷ್ಠಾನಕ್ಕೆ ಬಂದಿದ್ದು, ಸೋಮವಾರ (ಏ.26) ಬೆಳಗ್ಗೆ ಆರು ಗಂಟೆಯವರೆಗೂ ಅತಿ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಗುರುವಾರದಿಂದಲೇ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಬಂದ್‌ ಆಗಿದ್ದು, ಶುಕ್ರವಾರ ರಾತ್ರಿಯಿಂದ ಪೊಲೀಸರು ಇನ್ನಷ್ಟುಕಟ್ಟುನಿಟ್ಟಾಗಿ ಕಫä್ರ್ಯ ಜಾರಿಗೊಳಿಸಲಾರಂಭಿಸಿದರು. ಗಸ್ತು ವಾಹನಗಳ ಮೂಲಕ ಎಲ್ಲೆಡೆ ಸಂಚರಿಸಿ ಬೇಗ ಮನೆಗೆ ತೆರಳುವಂತೆ ಮೈಕ್‌ನಲ್ಲಿ ಘೋಷಿಸುತ್ತಿದ್ದರು. ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಮಾಡಿದರು. ಮೇಲ್ಸೇತುವೆ ಸೇರಿದಂತೆ ಅನೇಕ ಕಡೆ ಬ್ಯಾರಿಕೇಡ್‌ ಹಾಕಿ ಅನಗತ್ಯವಾಗಿ ವಾಹನಗಳು ಸಂಚಾರ ಮಾಡದಂತೆ ಕ್ರಮ ಕೈಗೊಂಡರು. ಈ ಎರಡು ದಿನಗಳ ಅವಧಿಯಲ್ಲಿ ಅನಗತ್ಯವಾಗಿ ಓಡಾಡುವ ದ್ವಿಚಕ್ರ ವಾಹನ, ಕಾರು, ಇತ್ಯಾದಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ.

ಅಂಗಡಿಗಳಿಗೆ ಧಾವಿಸಿದ ಜನರು:

ಎರಡು ದಿನಗಳ ‘ಅಘೋಷಿತ ಲಾಕ್‌ಡೌನ್‌’ನಿಂದ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಬಹುದು, ಇಲ್ಲವೇ ಲಭ್ಯವಾಗದೆ ಇರಬಹುದೆಂಬ ಕಾರಣದಿಂದ ಜನರು ಶುಕ್ರವಾರವೇ ದಿನಸಿ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು.

ತುರ್ತು ಸೇವೆಗೆ ಅಡ್ಡಿಯಿಲ್ಲ:

ತುರ್ತು ಮತ್ತು ಅಗತ್ಯ ಸೇವೆಗಳು ಸೇರಿದಂತೆ ಕೊರೋನಾ ಕಂಟೈನ್ಮೆಂಟ್‌ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸುವ ಸರ್ಕಾರದ ಕಚೇರಿಗಳು ವೀಕೆಂಡ್‌ ಕಫä್ರ್ಯ ವೇಳೆಯಲ್ಲೂ ಕಾರ್ಯನಿರ್ವಹಿಸಲಿವೆ. ಜೊತೆಗೆ, ದಿನದ 24 ಗಂಟೆ ಕಾರ್ಯನಿರ್ವಹಿಸಬೇಕಾದ ಅಗತ್ಯವಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದು, ಈ ಕಚೇರಿಗಳಿಗೆ ಹೋಗುವ ಸಿಬ್ಬಂದಿಯ ಪ್ರಯಾಣಕ್ಕೆ ಅವಕಾಶವಿರಲಿದೆ. ಅಲ್ಲದೆ, ಟೆಲಿಕಾಂ ಮತ್ತು ಇಂಟರ್ನೆಟ್‌ ಸೇವಾ ಕಂಪನಿಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಸಂಚಾರದ ಅವಧಿಯಲ್ಲಿ ಇವರೆಲ್ಲರೂ ತಾವು ಕಾರ್ಯನಿರ್ವಹಿಸುತ್ತಿರುವ ಇಲಾಖೆ, ಸಂಸ್ಥೆ, ಕಂಪನಿಯ ಅರ್ಹ ಗುರುತಿನ ಚೀಟಿಯೊಂದಿಗೆ ಪ್ರಯಾಣ ಬೆಳೆಸಬಹುದು.

ದೂರದ ಊರುಗಳ ಪ್ರಯಾಣಕ್ಕೆ ಅವಕಾಶ:

ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬೆಂಗಳೂರು ನಗರದಿಂದ ಬೇರೆ ಜಿಲ್ಲೆಗಳು ಮತ್ತು ಹೊರ ರಾಜ್ಯಗಳ ಪ್ರಯಾಣ ಬೆಳೆಸಲು ಬಸ್‌ ಸೇವೆ ಇರಲಿದೆ. ಅದೇ ರೀತಿ ರೈಲು ಮತ್ತು ವಿಮಾನ ಸೇವೆ ಲಭ್ಯವಿರುತ್ತದೆ. ಈ ಮಾರ್ಗಗಳಲ್ಲಿ ಪ್ರಯಾಣ ಬೆಳೆಸುವವರು ಸಾರ್ವಜನಿಕ, ಖಾಸಗಿ ಸಾರಿಗೆ ವಾಹನಗಳು ಮತ್ತು ಕ್ಯಾಬ್‌ಗಳನ್ನು ಬಳಸಿ ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ತೆರಳಬಹುದು ಮತ್ತು ಇದೇ ಸ್ಥಳಗಳಿಂದ ಮನೆಗೆ ಪ್ರಯಾಣಿಸಬಹುದು. ಆದರೆ, ಪ್ರಯಾಣಿಕರು ತಮ್ಮಲ್ಲಿ ಕಡ್ಡಾಯವಾಗಿ ಮಾನ್ಯತೆ ಪಡೆದಿರುವ ಪ್ರಯಾಣದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

ಮದ್ಯಕ್ಕಾಗಿ ಮುಗಿಬಿದ್ದರು:

ಮದ್ಯಪ್ರಿಯರು ಶುಕ್ರವಾರ ಸಂಜೆಯಿಂದಲೇ ಎರಡು ದಿನಗಳಿಗೆ ಅಗತ್ಯವಿರುವಷ್ಟು ಮದ್ಯವನ್ನು ಖರೀದಿಸಿದರು. ಅನೇಕ ಕಡೆ ಸರತಿ ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಏನಿರಲ್ಲ?

- ಥಿಯೇಟರ್‌, ಮಾಲ್‌, ಬಾರ್‌, ಪಬ್‌, ಜಿಮ್‌, ಆಡಿಟೋರಿಯಂ, ಸ್ಟೇಡಿಯಂ, ಈಜುಕೊಳ

- ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಸೇರಿದಂತೆ ಎಲ್ಲ ರೀತಿಯ ಸಭೆ ಸಮಾರಂಭ

- ಧಾರ್ಮಿಕ ಸ್ಥಳ, ಪೂಜಾ ಮಂದಿರಗಳಲ್ಲಿ ಪೂಜೆಗೆ ಅವಕಾಶ, ಸಾರ್ವಜನಿಕರ ಪ್ರವೇಶವಿಲ್ಲ

- ಬೆಂಗಳೂರಿನಲ್ಲಿ ಮೆಟ್ರೋ ರೈಲು ಸ್ಥಗಿತ. ಬಿಎಂಟಿಸಿ ಬಸ್‌ ಅಗತ್ಯ ಸೇವೆಗಳಿಗೆ ಮಾತ್ರ ಲಭ್ಯ

ಏನಿರುತ್ತೆ?

- ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದಿನಸಿ, ಹಣ್ಣು, ತರಕಾರಿ, ಹಾಲು, ಮೀನು, ಮಾಂಸದಂಗಡಿ

- ಔಷಧ ಅಂಗಡಿ, ಅಗತ್ಯ ಮತ್ತು ತುರ್ತು ಸೇವೆಗೆ ಸಂಬಂಧಿಸಿದ ಸರ್ಕಾರಿ, ಖಾಸಗಿ ಕಚೇರಿಗಳು

- ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌. ಇ-ಕಾಮರ್ಸ್‌ ಕಂಪನಿಗಳಿಂದ ಹೋಂ ಡೆಲಿವರಿ

- ದೂರ ಪ್ರಯಾಣದ ಬಸ್ಸು, ರೈಲು, ವಿಮಾನ. ತುರ್ತು ಸಂಚಾರಕ್ಕೆ ಖಾಸಗಿ ವಾಹನಕ್ಕೂ ಅವಕಾಶ