ನವದೆಹಲಿ(ಜ.12): ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ ಕಾರ್ಯಕ್ರಮ ವಿದೇಶಿ ಗಣ್ಯರ ಅನುಪಸ್ಥಿತಿಯಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಹೀಗೆ ಆದಲ್ಲಿ ಅದು 1966ರ ಬಳಿಕ ನಡೆದ ಮೊದಲ ಪ್ರಸಂಗವಾಗಲಿದೆ.

ಅದಕ್ಕೂ ಮೊದಲು 1952 ಮತ್ತು 1953ರಲ್ಲಿ ಕೂಡಾ ನಾನಾ ಕಾರಣಗಳಿಂದಾಗಿ ಮುಖ್ಯ ಅತಿಥಿಗಳಿಲ್ಲದೇ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಈ ಬಾರಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರನ್ನು ಭಾರತ ಸರ್ಕಾರ ಮುಖ್ಯ ಅತಿಥಿಯಾಗಿ ಅಹ್ವಾನಿಸಿತ್ತು. ಅವರು ಆಗಮಿಸಲು ಒಪ್ಪಿದ್ದರಾದರೂ, ಬ್ರಿಟನ್‌ನಲ್ಲಿ ಕೋವಿಡ್‌ ಕೈಮೀರಿರುವ ಹಿನ್ನೆಲೆಯಲ್ಲಿ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಕಡೆಯ ಹಂತದಲ್ಲಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಸುರಿನಾಮ್‌ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಸಂತೋಖಿ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅದೂ ದೃಢಪಟ್ಟಿಲ್ಲ.

ಹೀಗಾಗಿ ಯಾವ ಗಣ್ಯರನ್ನೂ ಆಹ್ವಾನಿಸದೆಯೇ ಕಾರ್ಯಕ್ರಮ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.